Couple Dies: ಡ್ರಮ್ನಲ್ಲಿ ಪತಿಯ ಕತ್ತರಿಸಿದ ದೇಹವನ್ನು ಇರಿಸಿದ ಮುಸ್ಕಾನ್, ಹನಿಮೂನ್ ನೆಪದಲ್ಲಿ ಆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಂಡನನ್ನು ಪ್ರಿಯಕರನ ಜತೆಗೂಡಿ ಕೊಲೆಗೈದ ಸೋನಮ್ ಪ್ರಕರಣಗಳು ಸೇರಿ ಸಣ್ಣ ಸಣ್ಣ ವಿಚಾರಗಳಿಗೆ ಡಿವೋರ್ಸ್ ಪಡೆಯುವ ವಿಚಾರಗಳು ತಮ್ಮ ಜೀವನದಿಂದ ಮದುವೆ ಎಂಬ ಮಾತನ್ನೇ ದೂರವಿಡುವಂತೆ ಮಾಡಿದರೆ, ಇಲ್ಲೊಂದು ಘಟನೆ ಇದ್ದರೆ ಇವರಂತೆ ಇರಬೇಕು. ಬದುಕಿ ಬಾಳಿದರೆ ಹೀಗೆ ಬಾಳ್ವೇ ಮಾಡಬೇಕು ಎಂದು ಹೇಳುವಂತಿದೆ. ಈ ಘಟನೆ ನಿಜಕ್ಕೂ ಎಂಥವರ ಮನಕಲುಕುತ್ತದೆ.
ಇದನ್ನೂ ಓದಿ: ತನಿಖೆ ಪೂರ್ತಿ ಮುಗಿಯುವವರೆಗೂ ಜೈಲಿನಲ್ಲಿರಲು ಸಿದ್ಧ: ಬೇಡಿಕೆ ಈಡೇರಿಕೆಗೆ ಸೋನಮ್ ವಾಂಗ್ಚುಕ್ ಆಗ್ರಹ | Sonam Wangchuk
ಪತ್ನಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿಗೆ ತನ್ನ ಹೆಂಡತಿ ಇನ್ನಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಳಗ್ಗೆ 9 ಗಂಟೆಗೆ ಆಕೆ ಉಸಿರು ಚೆಲ್ಲಿದ್ದಾರೆ. ಗಂಡ ಅದೇ ದಿನ ರಾತ್ರಿ 9 ಗಂಟೆಗೆ ಇಹಲೋಕ ತ್ಯಜಿಸಿರುವುದು ಇಡೀ ಗ್ರಾಮಸ್ಥರನ್ನೇ ದುಃಖಕ್ಕೆ ದೂಡಿದೆ. ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ. ತಮ್ಮ ಇಡೀ ಜೀವನವನ್ನು ಒಟ್ಟಿಗೆ ಬದುಕಿದ ಈ ದಂಪತಿ, ಸಾವಿನಲ್ಲೂ ಒಂದಾಗಿದ್ದು ಸಂಬಂಧಿಕರು ಮತ್ತು ಊರಿನವರಲ್ಲಿ ಕಣ್ಣೀರು ತರಿಸಿದೆ.
ಕುಟುಂಬ ಮೂಲಗಳ ಪ್ರಕಾರ, ಅ.4ರ ಶನಿವಾರ ಬೆಳಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ರಾಮದೇವಿ ಹಠಾತ್ ನಿಧನ ಹೊಂದಿದರು. ಪತ್ನಿಯ ಸಾವಿನ ಸುದ್ದಿ ಕೇಳಿ ಅವರ ಪತಿ ರಾಮರತನ್ಗೆ ದುಃಖ ತಡೆಯಲು ಆಗಲಿಲ್ಲ. ಎಲ್ಲರೂ ಸಾಂತ್ವನ ಹೇಳಿದರೂ ಹೆಂಡತಿ ಇಲ್ಲದೆ ಬದುಕುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡತೊಡಗಿತು. ಇನ್ನೇನು ರಾಮದೇವಿ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತಿದ್ದಾಗ, ರಾಮರತನ್ ಕುಸಿದು ಸಾವನ್ನಪ್ಪಿದ್ದಾರೆ. ಇಬ್ಬರ ದೇಹಗಳನ್ನು ಅಕ್ಕ-ಪಕ್ಕ ಇರಿಸಿ, ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಈ ವೇಳೆ ಇಡೀ ಗ್ರಾಮ ದಂಪತಿಯ ಸಾವಿಗೆ ಕಂಬನಿ ಮಿಡಿದಿದೆ.
ಝಾನ್ಸಿ ಜಿಲ್ಲೆಯ ಗರೂಟ ಪೊಲೀಸ್ ಠಾಣೆ ವ್ಯಾಪ್ತಿಯ ಇಂದ್ರಾನಗರದಲ್ಲಿ ಈ ಘಟನೆ ನಡೆದಿದೆ. ಪ್ರಮುಖ ಉದ್ಯಮಿ ರಾಮ್ ರತನ್ ಗುಪ್ತಾ (76) ಮತ್ತು ರಾಮದೇವಿ ಗುಪ್ತಾ (70) ಸಾವಿಗೀಡಾದ ದಂಪತಿಗಳು. ಅವರಿಗೆ ಅರವಿಂದ್ ಗುಪ್ತಾ, ಧಮೇಂದ್ರ ಗುಪ್ತಾ ಮತ್ತು ಉಪೇಂದ್ರ ಗುಪ್ತಾ ಎಂಬ ಮೂವರು ಮಕ್ಕಳಿದ್ದಾರೆ. ರತನ್ ಗುಪ್ತಾ ಹಮೀರ್‌ಪುರ ಜಿಲ್ಲೆಯ ಪರಸನ್ ಗ್ರಾಮಕ್ಕೆ ಸೇರಿದವರು. 50 ವರ್ಷಗಳ ಕಾಲ ಸುಖ ಸಂಸಾರ ಸಾಗಿಸಿದ ರಾಮ್ ರತನ್ ಮತ್ತು ರಾಮದೇವಿ, ಸಾವಿನಲ್ಲೂ ಒಂದಾದ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).