ನ್ಯೂಸ್

ದೇಶದಲ್ಲೇ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬೆಂಗಳೂರಿನಲ್ಲಿ ಸಿದ್ಧ

ಬೆಂಗಳೂರು: ಇಡೀ ದೇಶದಲ್ಲಿಯೇ ಅತ್ಯಂತ ಬೃಹತ್​ ಕರೊನಾ ಕೇರ್​ ಸೆಂಟರ್​ ರಾಜ್ಯ ರಾಜಧಾನಿಯಲ್ಲಿ ನಿರ್ಮಾಣವಾಗಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.

ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆಗಳ ಸಾಮರ್ಥ್ಯದ ಕರೊನಾ ಕೇರ್​ ಸೆಂಟರ್​ ನಿರ್ಮಾಣವಾಗಿದೆ. ಒಟ್ಟು ಐದು ಹಾಲ್​ಗಳಲ್ಲಿ ಹಾಸಿಗೆಗಳ ವ್ಯವಸ್ಥೆಯಾಗಿದೆ. ಬೆಳಗ್ಗೆ ತಿಂಡಿ, ಸ್ನ್ಯಾಕ್ಸ್​, ಊಟ, ಮನರಂಜನೆ, ಯೋಗಕ್ಕೂ ಅಗತ್ಯ ಸಿದ್ಧತೆ ಮಾಡಲಾಗಿದೆ. ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ನಿರ್ಮಿಸಿರುವ ಕರೊನಾ ಕೇರ್​ ಸೆಂಟರ್​ಗಳಲ್ಲಿ ಹಾಸಿಗೆಗಳ ಕೊರತೆಯಾದಾಗ ಇದನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದನ್ನೂ ಓದಿರಿ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ 1 ವರ್ಷ ವೇತನ ರಹಿತ ರಜೆ, ಲಕ್ಷಕ್ಕೂ ಹೆಚ್ಚು ನೌಕರರ ಪಾಲಿಗೆ ಮರಣಶಾಸನ?

ಬೃಹತ್​ ಕೋವಿಡ್​ ಕೇರ್​ ಸೆಂಟರ್​ಗೆ ಬಿ.ಎಸ್​.ಯಡಿಯೂರಪ್ಪ ಅವರು ಸಂಪುಟ ಸಹೋದ್ಯೋಗಿಗಳಾದ ಡಾ.ಸಿ.ಎನ್​. ಅಶ್ವತ್ಥನಾರಾಯಣ್​, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್, ಬಿ. ಶ್ರೀರಾಮುಲು, ಆರ್​. ಅಶೋಕ್​, ಶಾಸಕ ಎಸ್​.ಆರ್​. ವಿಶ್ವನಾಥ್​ ಅವರೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಬೃಹತ್​ ಕೋವಿಡ್ ಕೇರ್ ಸೆಂಟರ್​ನಲ್ಲಿ 100-200 ಜನರಿಗೆ ಒಬ್ಬ ವೈದ್ಯರಂತೆ 600 ವೈದ್ಯರು, 1000 ನರ್ಸ್‌ಗಳು ಇನ್ನಿತರ ಆರೋಗ್ಯ ಯೋಧರು ಬೇಕಾಗಿದ್ದು ಎಲ್ಲವನ್ನೂ ಸರ್ಕಾರ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ ಎಂದು ಸಚಿವ ಡಾ.ಕೆ. ಸುಧಾಕರ್​ ಹೇಳಿದರು.

ಹಳ್ಳಿಗೆ ಹೋಗಬೇಡಿ: ಜನರು ಅನಗತ್ಯವಾಗಿ ಬೆಂಗಳೂರಿನಿಂದ ಹಳ್ಳಿಗಳತ್ತ ತೆರಳಬೇಡಿ. ಹಳ್ಳಿಗಳಲ್ಲಿ ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಿ. ಇದು ಒಂದೆರಡು ದಿನದ ಹೋರಾಟವಲ್ಲ. ಸತತ ಪ್ರಯತ್ನ, ನಿಮ್ಮೆಲ್ಲರ ಸಹಕಾರ, ಬೆಂಬಲ ಹಾಗೂ ಸಾಮೂಹಿಕ ಇಚ್ಛಾಶಕ್ತಿಯೊಂದಿಗೆ ಸೋಂಕಿನ ವಿರುದ್ಧ ಜಯಿಸೋಣ ಎಂದು ಸಿಎಂ ಮತ್ತೊಮ್ಮೆ ಮನವಿ ಮಾಡಿದರು.