ನ್ಯೂಸ್

ಬೆಂಗಳೂರು ಹಬ್ಬದಲ್ಲಿ ಕೊಳ್ಳೆ ಹೊಡೆದ ಕಿ'ಲೇಡಿ'; ಪ್ರತಿ ಪ್ಲಾಸ್ಟಿಕ್ ಖುರ್ಚಿಗೆ 50 ರೂ. ಬಾಡಿಗೆ | ಲೂಟಿ ಅನುಮಾನ

ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು: ಬೆಂಗಳೂರು ಹಬ್ಬವನ್ನು ವೈಭವೋಪೇರಿತವಾಗಿ ನಡೆಸುವ ಮಹದೋದ್ದೇಶದಡಿ ಸದ್ದಿಲ್ಲದೇ ಲೂಟಿಯೊಂದು ನಡೆದು ಹೋಗಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ.

2023ರ ಮಾರ್ಚ್​ನಲ್ಲಿ ಬೆಂಗಳೂರು ಹಬ್ಬ ನಡೆಯಿತು. ಜನತೆ ಸಂಭ್ರಮದಿಂದ ಪಾಲ್ಗೊಂಡರು, ವೈಭವೋಪೇರಿತವಾಗಿ ನಡೆಯಿತೆಂದು ಸರ್ಕಾರವೂ ಭಾವಿಸಿತು. ಇದೀಗ ಹಬ್ಬಕ್ಕೆ ಮಾಡಿದ ವೆಚ್ಚ ಪಾವತಿ ಮಾಡುವ ‘ಸುಸಮಯ’! ಈ ನಡುವೆ ಅಧಿಕಾರಿಗಳಿಗಳ ಆಡಂಬೋಲದ ಬೆನ್ನು ಬಿದ್ದ ಸಂದರ್ಭದಲ್ಲಿ ಅಚ್ಚರಿಯ ಮಾಹಿತಿ ಸಿಕ್ಕಿದೆ.

ಬೆಂಗಳೂರು ಹಬ್ಬವು ಕಲಾವಿದರು, ಚಲನಚಿತ್ರಗಳು ಮತ್ತು ಆಹಾರದ ಮೂಲಕ ಬೆಂಗಳೂರು ನಗರದ ಭವ್ಯತೆ ಮತ್ತು ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಉತ್ಸವವಾಗಿ ಆಚರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಘೊಷಿಸಿತ್ತು. ಆದರೆ, ಇಲ್ಲಿ ಬಿಲ್ವಿದ್ಯೆ ಕೈಚಳಕವೂ ಸೇರಿತ್ತೆಂಬ ಅನುಮಾನ ಈಗ ಕಾಡಲಾರಂಭವಾಗಿದೆ. ಚುನಾವಣೆ ನೆಪದಲ್ಲಿ ಈವರೆಗೆ ಹಣ ಪಾವತಿ ಮಾಡಿಲ್ಲ. ಹಣ ಪಾವತಿಗೆ ಎಲ್ಲ ಸಿದ್ಧತೆ ನಡೆದಿರುವಾಗಲೇ ಕಲಾವಿದರು ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸುತ್ತಿದ್ದಂತೆ ಅಧಿಕಾರಿಗಳು ತಡಬಡಾಯಿಸಿದ್ದಾರೆ.

ಕರ್ನಾಟಕದಾದ್ಯಂತ ಕಲಾವಿದರು ಈ ಹಬ್ಬದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಡುವ ವೇದಿಕೆ ಇದು, ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದ ಸುತ್ತಮುತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿಯೇ ಅದ್ದೂರಿಯಾಗಿಯೇ ಆಯೋಜಿಸುವುದಾಗಿಯೂ ಸರ್ಕಾರ ಘೋಷಿಸಿತ್ತು.

ಅಂದಹಾಗೆ ಬಾಲಭವನ ಆವರಣದ ಆಂಪಿ ಥಿಯೇಟರ್​ನಲ್ಲಿ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ, ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮ, ಕಬ್ಬನ್​ಪಾರ್ಕ್​ನ ಬ್ಯಾಂಡ್ ಸ್ಟಾಂಡ್ ವೇದಿಕೆಯಲ್ಲಿ ಪೊಲೀಸ್ ಬ್ಯಾಂಡ್ ವಾದನ, ನೃತ್ಯ ಜನಪದ ಗಾಯನ, ಯಕ್ಷಗಾನ, ನಾಟಕ ಹಾಗೂ ವಿವಿಧ ರಾಜ್ಯಗಳ ಸಂಘಟನೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಇದೆಲ್ಲ ಇತಿಹಾಸ, ಈ ಕಾರ್ಯಕ್ರಮದ ಖರ್ಚುವೆಚ್ಚ ಪಾವತಿಯ ಸಿದ್ಧತೆ ವರ್ತಮಾನದ ವಿಷಯವಾಗಿದೆ.

ಕಲಾವಿದರ ಕಡೆಗಣನೆ

ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾವಿದರನ್ನು ಕಡೆಗಣಿಸಲಾಯಿತು ಎಂಬ ದನಿ ಆಗಲೇ ಎದ್ದಿತ್ತು. ಕಾರ್ಯಕ್ರಮ ಕೊಡಬೇಕು ಎಂದು ಎಲ್ಲೋ ಒಂದು ಮೂಲೆಯಲ್ಲಿ ಅವಕಾಶ ಕೊಟ್ಟರು, ಜನರ ಉಪಸ್ಥಿತಿಯೂ ಇರಲಿಲ್ಲ. ಸಂಭಾವನೆಯ ವಿಚಾರದಲ್ಲೂ ತಾರತಮ್ಯ ಮಾಡಲಾಯಿತು. ಸಿನಿ ಕಲಾವಿದರಿಗೆ ಲಕ್ಷ ಲಕ್ಷ ನೀಡಿದರೆ 17 ಜಾನಪದ ಕಲಾವಿದರು, ನಾಲ್ವರು ಸಹ ಕಲಾವಿದರಿಗೆ ಸೇರಿ 1.5 ಲಕ್ಷ ರೂ. ನೀಡಿ ಕೈ ತೊಳೆದುಕೊಂಡರು ಎಂದು ಕಲಾವಿದರೊಬ್ಬರು ಬೇಸರ ಹೊರಹಾಕಿದ್ದಾರೆ. ಸಿನಿ ಕಲಾವಿದರೊಂದಿಗೆ ಅಡ್ಜೆಸ್ಟ್​ಮೆಂಟ್ ನಡೆದಿದೆ. ಕಮೀಷನ್ ಹಂಚಿಕೆಯ ಮಾತುಕತೆ ಮೂಲಕ ಕಾರ್ಯಕ್ರಮ ನೀಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕೆಂಬುದು ಅವರ ಒತ್ತಾಯವಾಗಿದೆ.

ಅನುಮಾನಾಸ್ಪದ ವೆಚ್ಚಗಳು

ವಿಧಾನಸೌಧ ಮುಂಭಾಗದ ಕಾರ್ಯಕ್ರಮಕ್ಕೆ ಬರುವ ಜನರು ಕೂರುವುದಕ್ಕಾಗಿ ಎಂಟು ಸಾವಿರ ಪ್ಲಾಸ್ಟಿಕ್ ಚೇರ್ ಹಾಕಿಸಲಾಗಿತ್ತು, ಅದಕ್ಕಾಗಿ 4 ಲಕ್ಷ ರೂ. ಪಾವತಿ ಮಾಡಲು ಬಿಲ್ ತಯಾರಾಗಿದೆ. ಅಂದರೆ ಪ್ರತಿ ಚೇರ್ ಬಾಡಿಗೆ ಬರೋಬ್ಬರಿ 50 ರೂ.! ಎರಡು ಪ್ರವೇಶ ದ್ವಾರ, ಬ್ಯಾಕ್​ಡ್ರಾಪ್​ಗೆ 32.50 ಲಕ್ಷ ರೂ., ಫುಡ್ ಸ್ಟಾಲ್​ನಲ್ಲಿ 100 ಚೇರ್​ಗೆ 7500 ರೂ., ಇನ್ನೊಂದು ಸ್ಥಳದಲ್ಲಿ 200 ಚೇರ್​ಗೆ 15 ಸಾವಿರ ರೂ., ಒಂದು ದಿನದ ಪುರುಷ ಹೌಸ್ ಕೀಪಿಂಗ್ (50 ಸಂಖ್ಯೆ) 1,90,000 ರೂ., ಮಹಿಳಾ ಹೌಸ್ ಕೀಪಿಂಗ್ (20) 1,80,000 ರೂ. ನಿಗದಿಪಡಿಸಲಾಗಿತ್ತು. ಸ್ವಚ್ಛತಾ ಸಾಮಗ್ರಿ (ಡಸ್ಟ್​ಬಿನ್ ವಾಕ್ಯೂಮ್ ಮಶೀನ್) 65 ಸಾವಿರ ರೂ., 200 ಡಸ್ಟ್​ಬಿನ್​ಗೆ 40 ಸಾವಿರ ರೂ., 10 ಜನ ಸೂಪರ್ ವೈಸರ್​ಗಳಿಗೆ 50 ಸಾವಿರ ರೂ., ಸಾಮಾನ್ಯ ಲೈಟಿಂಗ್ (400 ಸಂಖ್ಯೆ) 2,80,000 ರೂ. ನಿಗದಿಮಾಡಿದ್ದಾಗಿ ಸರ್ಕಾರದ ದಾಖಲೆಯಲ್ಲಿದೆ. ಕಬ್ಬನ್ ಪಾರ್ಕ್​ನಲ್ಲಿ 300 ಚೇರ್ ಹಾಕಿದ್ದಕ್ಕೆ 22,500 ರೂ., ನೂರು ಟೇಬಲ್​ಗೆ 75,000, ಚಿತ್ರಸಂತೆಯಲ್ಲಿ 400 ಚೇರ್ ಹಾಕಿದ್ದಕ್ಕೆ 30 ಸಾವಿರ ರೂ., 200 ಟೇಬಲ್​ಗೆ 90,000 ರೂ. ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ ಜನರೇಟರ್​ಗೆ 1,50,000, ಆಂಪ್ಲಿಫೈರ್​ಗೆ (10) 3,25,000 ರೂ., ಇಬ್ಬರು ಸೌಂಡ್ ಟೆಕ್ನೀಶಿಯನ್​ಗೆ 40 ಸಾವಿರ ರೂ. ನೀಡುತ್ತಿರುವ ಪ್ರಸ್ತಾವನೆಗೆ ಅಧಿಕಾರಿಗಳು ಅನುಮತಿಯೂ ನೀಡಿದ್ದಾರೆ. ಈ ಲೆಕ್ಕಾಚಾರ ಸಾಮಾನ್ಯವಾಗಿಯೇನು ಕಾಣಿಸುತ್ತಿಲ್ಲ.

ಸಮನ್ವಯ ಕೊರತೆ

ಕಲಾವಿದರಿಗೆ ಗುಣಮಟ್ಟದ ಊಟದ ವ್ಯವಸ್ಥೆ ಇರಲಿಲ್ಲ, ವಸತಿಗೂ ವ್ಯವಸ್ಥೆಯಾಗಿರಲಿಲ್ಲ ಎಂದು ಕಲಾವಿದರು ಅಸಮಾಧಾನ ಹೊರಹಾಕಿದ್ದಾರಲ್ಲದೇ, ಇಲಾಖೆ ಅಧಿಕಾರಿಗಳಿಗೂ ಮತ್ತು ಸಚಿವರ ನಡುವೆಯೇ ಸಮನ್ವಯತೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕಲಾವಿದರಿಗೆಷ್ಟು?

  • ಅನನ್ಯಾ ಭಟ್ ಮತ್ತು ಬ್ಯಾಂಡ್ 9,50,000 ರೂ.,
  • ನವೀನ್ ಸಜ್ಜು ಮತ್ತು ಬ್ಯಾಂಡ್ 4,50,000 ರೂ.,
  • ಜನಾರ್ದನ್ ಮತ್ತು ತಂಡ 12,50,000 ರೂ.,
  • ಸರಿಗಮಪ ಕಲಾವಿದರು 15,50,000ರೂ.,
  • ಪ್ರಭಾತ್ ಕಲಾವಿದರು 2,75,000 ರೂ.ಗೆ ಪ್ರಸ್ತಾವನೆ
  • ಸಿದ್ಧವಾಗಿರುವ ದಾಖಲೆ ಇದೆ.
ಬೆಂಗಳೂರು ಹಬ್ಬದ ಬಗ್ಗೆ ಅನೇಕ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ. ಖರ್ಚು ವೆಚ್ಚದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಶೀಘ್ರವೇ ಸರ್ಕಾರವನ್ನು ಭೇಟಿ ಮಾಡಿ ಒತ್ತಾಯ ಮಾಡುವವರಿದ್ದೇವೆ.| ಜಯಸಿಂಹ ಕಲಾವಿದ