ಬೆಂಗಳೂರು: ಸದ್ಯದ ಮಟ್ಟಿಗೆ ಸಕಲರಿಗೂ ಕರೋನಾದ್ದೇ ಭೀತಿ. ಇದೇ ಕಾರಣಕ್ಕೆ ಜನರು ಹೊರಹೋಗುವುದನ್ನೂ ಕಡಿಮೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳು ಬಿಕೋ ಎನ್ನುತ್ತಿವೆ.
ಟ್ರಾಫಿಕ್ ಪೊಲೀಸರಗಿಂತೂ ಈ ಕರೊನಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರೊನಾ ಹೆಸರು ಹೇಳಿಕೊಂಡು ಕುಡಿದು ಗಾಡಿ ಚಾಲನೆ ಮಾಡುವವರು ಪಾರಾಗುತ್ತಿದ್ದಾರೆ.
ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರಿಗೆ ಈ ಅನುಭವ ಆಗಿದೆ. ಅಲ್ಲಿ ಸಂಜೆ ಹೊತ್ತು ಡ್ರಿಂಕ್ ಆ್ಯಂಡ್ ಡ್ರೈವ್ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಹಲವರು ಮಷಿನ್ನ್ನು ಬಾಯಿಯೊಳಗೆ ಇಡಲು ಒಪ್ಪಲೇ ಇಲ್ಲ.
ಅದನ್ನು ಊದುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು. ಕೆಲವು ಪೊಲಿಸರು ತೋರಿಸಿದ ತಪಾಸಣಾ ಮಷಿನ್ನ್ನು ಬಾಯಿಯಲ್ಲಿ ಇಟ್ಟು ತಪಾಸಣೆಗೆ ಸಹಕರಿಸಿದರೆ ಒಂದಷ್ಟು ಮಂದಿಯಂತೂ ಖಡಾಖಂಡಿತವಾಗಿ ನಿರಾಕರಿಸುತ್ತಿದ್ದಾರೆ. ಕುಡಿದಿರಬಹುದು ಎಂಬ ಅನುಮಾನವಿದ್ದವರೇ ಮಷಿನ್ ಬಾಯಿಯಲ್ಲಿ ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಅಯ್ಯೋ ನಾವಂತೂ ಮಷಿನ್ ಊದೋದಿಲ್ಲ. ನಮ್ಮನ್ನು ಬಿಟ್ಟುಬಿಡಿ. ನಮಗೂ ಕರೊನಾ ಬಂದರೆ ಕಷ್ಟ ಎಂದು ಬಹುಪಾಲು ವಾಹನ ಚಾಲಕರು ಹೇಳುತ್ತಿದ್ದಾರೆ.
ಅವರಿಗೆ ಧೈರ್ಯ ತುಂಬಿ, ಏನೂ ಆಗೋದಿಲ್ಲ ಎಂದು ಹೇಳಿ ತಪಾಸಣೆ ನಡೆಸುವಷ್ಟರಲ್ಲಿ ಟ್ರಾಫಿಕ್ ಪೊಲೀಸರು ಹೈರಾಣಾಗುತ್ತಿದ್ದಾರೆ.