ನ್ಯೂಸ್

ಸಮುದ್ರ ಆಹಾರದಲ್ಲಿ ಮತ್ತೊಮ್ಮೆ ಪತ್ತೆಯಾದ ಕರೊನಾ ವೈರಸ್​..!

ಬೀಜಿಂಗ್​: ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದ್ದ ಸಮುದ್ರ ಆಹಾರದಲ್ಲಿ ಮತ್ತೊಮ್ಮೆ ಕರೊನಾ ವೈರಸ್​ನ ಕುರುಹುಗಳು ಕಂಡು ಬಂದಿವೆ ಎಂದು ಚೀನಾ ಅಧಿಕಾರಿಗಳು ಹೇಳಿದ್ದಾರೆ.

ಚೀನಾದ ಡಾಲಿಯನ್​ ನಗರದ ಬಂದರಿಗೆ ತರಿಸಲಾಗಿದ್ದ ಸಮುದ್ರ ಆಹಾರದ ಪ್ಯಾಕೇಜಿಂಗ್​ನಲ್ಲಿ ವೈರಸ್​ ಕಂಡು ಬಂದಿದೆ. ಇದನ್ನು ಯಾಂಟೈ ನಗರದ ಮೂರು ಕಂಪನಿಗಳು ಆಮದು ಮಾಡಿಕೊಂಡಿದ್ದವು. ಇಲ್ಲಿ ಕಂಡುಬಂದಿದ್ದರೂ ಅದರ ಮೂಲ ಯಾವುದು ಎಂಬುದು ಗೊತ್ತಾಗಿಲ್ಲ ಎಂದು ಯಾಂಟೈ ಸ್ಥಳೀಯಾಡಳಿತ ಮಾಹಿತಿ ನೀಡಿದೆ.

ಜುಲೈ ಬಳಿಕ ಸಮುದ್ರಾಹಾರದಲ್ಲಿ ವೈರಸ್​ ಕಂಡುಬರುತ್ತಿರುವ ರೆಡನೇ ಪ್ರಕರಣ ಇದಾಗಿದೆ. ಈ ಹಿಂದೆ ಈಕ್ವೆಡಾರ್​ನ ಜಿಂಗಿ ಮೀನುಗಳಲ್ಲಿ (ಶ್ರಿಂಪ್​) ವೈರಸ್​ ಪತ್ತೆಯಾಗಿತ್ತು. ಹೀಗಾಗಿ ಅಲ್ಲಿಂದ ಸಮುದ್ರ ಉತ್ಪನ್ನ ಆಮದು ಮಾಡಿಕೊಳ್ಳುವುದನ್ನು ಚೀನಾ ನಿಷೇಧಿಸಿತ್ತು.

ಆಮದು ಮಾಡಿಕೊಂಡಿದ್ದ ಸಮುದ್ರ ಆಹಾರವನ್ನು ಬೇರೆಡೆಗೆ ರಫ್ತು ಮಾಡಲು ಸಂಸ್ಕರಿಸಲಾಗುತ್ತಿತ್ತು. ಕೆಲ ಪ್ರಮಾಣವಿನ್ನೂ ಗೋದಾಮಿನಲ್ಲಿಯೇ ಇತ್ತು. ಯಾವುದೂ ಸ್ಥಳೀಯ ಮಾರುಕಟ್ಟೆ ಪ್ರವೇಶಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಧಿಕಾರಿಗಳು ಎಲ್ಲ ಸಮುದ್ರ ಆಹಾರವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನು ಸಮಸ್ಕರಿಸುವಲ್ಲಿ ತೊಡಗಿದ್ದ ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.