ಭೋಪಾಲ್: ಕೋಳಿಗಳಲ್ಲಿ ಕರೊನಾ ವೈರಸ್? ಕೋಳಿ ಸಾಕಣಿಕಾ ಕೇಂದ್ರಗಳಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಕೋಳಿ ಸಾಕಣಿಕಾ ಕೇಂದ್ರಗಳಲ್ಲಿ ಕೊವಿಡ್-19 ಇರುವುದು ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಭೋಪಾಲ್, ಗ್ವಾಲಿಯರ್, ಇಂಧೋರ್, ಉಜ್ಜೈನ್, ರತ್ಲಂ, ದೇವಾಸ್, ಇಂಧೋರ್, ಬದ್ನಾಗರ, ಸೆಹೋರ್, ಬಾರ್ವಾನಿ ಮತ್ತು ಮೊಹೋಗಳಲ್ಲಿನ ಪೌಲ್ಟ್ರಿಗಳಲ್ಲಿದ್ದ ಕೋಳಿಗಳ ರಕ್ತದ ಮಾದರಿಗಳನ್ನು ಆಯಾ ಜಿಲ್ಲಾಡಳಿತಗಳಿಂದ ಕೊವಿಡ್-19 ಟೆಸ್ಟ್ಗೆ ಒಳಪಡಿಸಲಾಗಿತ್ತು. ಈಗ ಅಲ್ಲೆಲ್ಲ ಕಡೆಗಳಲ್ಲೂ ಕರೊನಾ ಇರುವುದು ದೃಢಪಟ್ಟಿದೆ ಎಂದು ವರದಿಯಾಗಿತ್ತು. ಇದನ್ನು ಕೇಳಿದ ಅಲ್ಲಿನ ಜನ ಸಿಕ್ಕಾಪಟೆ ಗಾಬರಿಯಾಗಿದ್ದರು. ಚಿಕನ್ ಪ್ರಿಯರಂತೂ ತುಂಬ ತಲೆಕೆಡಿಸಿಕೊಂಡಿದ್ದರು. ಪೌಲ್ಟ್ರಿಗಳಿಂದ ಕೋಳಿಗಳನ್ನು ತೆಗೆದುಕೊಂಡು ಹೋಗಿ, ಚಿಕನ್ ತಿಂದವರೆಲ್ಲ ವಿಪರೀತ ಭಯಭೀತರಾಗಿದ್ದರು. ಇದನ್ನೂ ಓದಿ: ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್; ಯಾವುದರ ಮುನ್ಸೂಚನೆ ಇದು…?
ಆದರೆ ಇದೆಲ್ಲ ಸುಳ್ಳು ಸುದ್ದಿ ಎಂದು ಮಧ್ಯಪ್ರದೇಶದ ಪಶುಸಂಗೋಪನಾ ಇಲಾಖೆ ಸ್ಪಷ್ಟಪಡಿಸಿದೆ. ಚಿಕನ್ನ್ನು ತಿನ್ನುವುದರಿಂದ ಕರೊನಾ ಸೋಂಕಿನ ಭಯವಿಲ್ಲ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಅದನ್ನು ಯಾರೂ ನಂಬಬೇಡಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಸೀಲ್ಡೌನ್, ಈ 5 ಏರಿಯಾಗಳು ಕಂಪ್ಲೀಟ್ ಬಂದ್
ಕೋಳಿ ಸಾಕಣಾ ಕೇಂದ್ರಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ ಎಂಬ ಮಾಧ್ಯಮವೊಂದರ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆದ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಅಷ್ಟೇ ಅಲ್ಲ, ಯಾವ ಪೌಲ್ಟ್ರಿಯಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗಿಲ್ಲ. ಕೋಳಿಗಳಲ್ಲಿ ಕರೊನಾ ಸೋಂಕು ಪತ್ತೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.(ಏಜೆನ್ಸೀಸ್)