ನ್ಯೂಸ್

ಕರೊನಾ ಎಫೆಕ್ಟ್​: ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೂಡಲಸಂಗಮದ ಸಂಗಮೇಶ್ವರ ದೇವಾಲಯ, ದಾಸೋಹ ಭವನ, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ಇಂಗಳೇಶ್ವರದ ಸ್ಮಾರಕ, ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಸಂಗಮೇಶ್ವರ ದೇವಸ್ಥಾನ, ಬೆಳಗಾವಿಯ ಗಂಗಾಂಬಿಕಾ ಐಕ್ಯ ಮಂಟಪ, ಮುದ್ದೇಬಿಹಾಳದ ನೀಲಾಂಬಿಕಾ ಐಕ್ಯ ಮಂಟಪ, ಬೇಲೂರಿನ ಶ್ರೀಚನ್ನಕೇಶವಸ್ವಾಮಿ, ಹಳೇಬೀಡಿನ ಹೊಯ್ಸಳೇಶ್ವರ, ಶ್ರವಣಬೆಳಗೊಳ, ಸಕಲೇಶಪುರದ ಮಂಜ್ರಾಬಾದ್ ಕೋಟೆ, ಹಾಸನದ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ನಿಷೇಧ

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಯುಗಾದಿ ಜಾತ್ರಾ ಮಹೋತ್ಸವವನ್ನು ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಿಸಲಾಗಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮ.ಬೆಟ್ಟದಲ್ಲಿ ಯುಗಾದಿ ಜಾತ್ರೆಯನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಬಗ್ಗೆ ಸ್ಪಷ್ಟಪಡಿಸಿದರು. ಯುಗಾದಿ ವೇಳೆ 2 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು.

ಬಳ್ಳಾರಿ ಜಿಲ್ಲೆಯಲ್ಲಿ ಕರೊನಾಕ್ಕೆ ಸಂಬಂಧಿಸಿದಂತೆ ಗೃಹಬಂಧನಕ್ಕೆ ಒಳಗಾದವರ ಸಂಖ್ಯೆ 50ಕ್ಕೆ ಏರಿದೆ. ಮಂಗಳವಾರ 11 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 10 ಜನರನ್ನು ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕರೊನಾ ಪ್ರಕರಣ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ನಕುಲ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿರವಾರದ ನಿವಾಸಿ ಗೌಸ್​ಪಾಷಾ ದುಬೈನಿಂದ ರಜೆ ಮೇಲೆ ಬಂದಿದ್ದು, ಆರೋಗ್ಯಾಧಿಕಾರಿ ಪರಿಮಳ ಮೈತ್ರಿ ಮತ್ತು ಪ್ರಯೋಗ ಶಾಲಾ ತಜ್ಞರ ತಂಡ ಆರೋಗ್ಯ ತಪಾಸಣೆ ಮಾಡಿದೆ. ಆ ವ್ಯಕ್ತಿ ಆರೋಗ್ಯದಿಂದಿದ್ದಾರೆ.