ನ್ಯೂಸ್

ಸಾಮಾಜಿಕ ಅಂತರ ಗಮನದಲ್ಲಿಟ್ಟುಕೊಂಡು ಪುನಾರಂಭದ ಸಿದ್ಧತೆಯಲ್ಲಿದೆ ದೆಹಲಿ ವಿಮಾನ ನಿಲ್ದಾಣ

ದೆಹಲಿ: ಕೋವಿಡ್​ -19 ಹರಡುವಿಕೆ ತಡೆಗಟ್ಟಲು ದೇಶದಲ್ಲಿ ಒಂದು ತಿಂಗಳಿಂದ ಲಾಕ್​ಡೌನ್​ನಿಂದಾಗಿ ಬಂದ್​ ಆಗಿರುವ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಪುನಾರಂಭಕ್ಕೆ ಸಿದ್ಧತೆ ನಡೆಸಿದೆ.

ಲಾಕ್​ ಡೌನ್​ನಿಂದಾಗಿ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಚ್ಚಿದ್ದು, ವಿಮಾನ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಮೇ 3 ರ ನಂತರ ಲಾಕ್​ಡೌನ್​ ತೆರಗವುಗೊಂಡರೆ ವಿಮಾನ ನಿಲ್ದಾಣವನ್ನು ಪುರಾರಂಭಗೊಳಿಸುವ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎ​ಫ್​) ವಿಮಾನ ನಿಲ್ದಾಣ ಭದ್ರತಾ ಹೊಣೆಯ ಜತೆಗೆ ಭದ್ರತಾ ಪಡೆ ಸಿಬ್ಬಂದಿಗೆ ಹೊಸ ನಿಯಮ ಜಾರಿಗೊಳಿಸುವ ಹೊಣೆಯನ್ನೂ ಹೊತ್ತುಕೊಂಡಿದೆ. ವಿಮಾನ ನಿಲ್ದಾಣ ಪುನಾರಂಭಿಸುವ ಜತೆಗೆ ಸೋಂಕು ಹರಡದಂತೆ ತಡೆಯಲು ನೂತನ ಕಾನೂನು, ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ನಿಯಮಾವಳಿಗಳಂತೆ ಇನ್ನು ಮುಂದೆ ವಿಮಾನ ನಿಲ್ದಾಣ ಪ್ರವೇಶಿಸುವಾಗ ಪ್ರತಿಯೊಬ್ಬರಿಗೂ ದೇಹದ ಉಷ್ಣಾಂಶ ಪರೀಕ್ಷೆ ನಡೆಸಲಾಗುತ್ತದೆ. ಆ ನಂತರವೇ ಪ್ರವೇಶ ನೀಡಲಾಗುತ್ತದೆ. ಒಂದು ವೇಳೆ ಸಣ್ಣ ಪ್ರಮಾಣದ ಜ್ವರವಿದ್ದರೂ ಪ್ರವೇಶಕ್ಕೆ ತಡೆ ಇರುತ್ತದೆ. ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಸರದಿ ಸಾಲಿನಲ್ಲಿ ನಿಲ್ಲುವುದನ್ನು ನಿಷೇಧಿಸಿ ಸಿಟ್​ ಆ್ಯಂಡ್​ ವೇಯ್ಟ್​ ಪದ್ದತಿಯನ್ನು ಜಾರಿಗೆ ತರಲಾಗುತ್ತದೆ. ಆಸನ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಒಂದು - ಮತ್ತೊಂದು ಆಸನಗಳ ಮಧ್ಯೆ ಒಂದು ಮೀ. ಅಂತರವಿರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ವಿಮಾನದ ಒಳಗೆ ಶೌಚಾಲಯದ ಬಳಕೆಯನ್ನು ಮಿತಿಗೊಳಿಸಲಾಗುತ್ತದೆ ಎಂದು ತಿಳಿಸಿದೆ.

ಆಹಾರ ಪದಾರ್ಥಗಳನ್ನು ವಿಮಾನದ ಒಳಗೆ ತರದಂತೆ ನಿಷೇಧಿಸಿ ಗೋ ಏರ್​ ವಿಮಾನ ಸಂಸ್ಥೆ ಈಗಾಗಲೇ ಆದೇಶ ಹೊರಡಿಸಿದೆ. ವಿಮಾನದಲ್ಲಿ ಊಟ ನಿಷೇಧಿಸಲಾಗಿದೆ, ವಿಮಾನಯಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಜತಗೆಗೆ ಮಾತುಕತೆ ಕಡಿಮೆ ಮಾಡಲಾಗುತ್ತದೆ ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್​)