ನ್ಯೂಸ್

ಒಂದು ಲಕ್ಷ ದಾಟಿತು ಅಮೆರಿಕದಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ

ವಾಷಿಂಗ್ಟನ್​: ಕರೊನಾ COVID19 ವೈರಸ್ ಸೋಂಕಿನಿಂದಾಗಿ ಅತಿಹೆಚ್ಚು ತಲ್ಲಣಗೊಂಡಿರುವ ಅಮೆರಿಕದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಜಾಗತಿಕವಾಗಿಯೂ ಈ ಸೋಂಕು ಜನರ ಆರೋಗ್ಯದ ಮೇಲಷ್ಟೇ ಅಲ್ಲ, ಆರ್ಥಿಕತೆ ಮೇಲೂ ಕೆಟ್ಟ ಪರಿಣಾಮ ಬೀರಿದೆ.

ಅಮರಿಕದಲ್ಲಿ ಸಂಭವಸಿರುವ ಸಾವಿನ ಸಂಖ್ಯೆಯಲ್ಲಿ ಮೂರನೇ ಒಂದಂಶ ಸಾವು ಜಗತ್ತಿನ ಹಣಕಾಸು ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ನ್ಯೂಯಾರ್ಕ್​ ಮತ್ತು ಅದರ ಪಕ್ಕದ ನ್ಯೂಜೆರ್ಸಿಯಲ್ಲಾಗಿದೆ. ಅಮೆರಿಕದಲ್ಲಿ ಆರ್ಥಿಕವಾಗಿ ಇದು ಕೆಟ್ಟ ಹೊಡೆತ ನೀಡಿದ್ದು ಕಳೆದ ಮೂರು ತಿಂಗಳ ಅವಧಿಯಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 3.5 ಕೋಟಿ. ಒಂದು ಆಶಾದಾಯಕ ಬೆಳವಣಿಗೆ ಏನೆಂದರೆ ಅಮೆರಿಕದಲ್ಲಿ ಈಗ ಸಾವಿನ ಪ್ರಮಾಣ ಮತ್ತು ಹೊಸ ಕೇಸ್​ಗಳ ಪತ್ತೆ ಪ್ರಮಾಣದ ಗಣನೀಯವಾಗಿ ಇಳಿಮುಖವಾಗಿದೆ. ಬಹುತೇಕ ಎಲ್ಲ 50 ರಾಜ್ಯಗಳೂ ತಮ್ಮ ಆರ್ಥಿಕತೆಯ ಪುನಶ್ಚೇತನಕ್ಕೆ ಕ್ರಮಗಳನ್ನು ಘೋಷಿಸಿವೆ.

ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಕೊರಿಯನ್ ಯುದ್ಧ ಸಂಕಷ್ಟ ಶುರುವಾದ ಅಂದಿನಿಂದ ಅಮೆರಿಕನ್ ಸೇನಾ ಪಡೆಯಲ್ಲಿ ಪ್ರತಿವರ್ಷ ಸಾವಿಗೀಡಾಗುವ ಸಂಖ್ಯೆಯನ್ನು ಕರೊನಾ ಸೋಂಕಿತರ ಸಾವಿನ ಸಂಖ್ಯೆ ಸರಿಗಟ್ಟಿದೆ. ಅದೇ ರೀತಿ, 1968ರಲ್ಲಿ ಉಂಟಾಗಿದ್ದ ಫ್ಲೂ ಎಂಬ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನೂ ಸರಿಗಟ್ಟಿದೆ. ಇದೇ ರೀತಿ, ಅದಕ್ಕಿಂತಲೂ ಹಿಂದೆ ಬಂದಿದ್ದ ಮತ್ತೊಂದು ಫ್ಲೂ ಮರಣ ಪ್ರಮಾಣ 1.16 ಲಕ್ಷದ ಕಡೆಗೆ ಇದು ಮುಂದುವರಿದಿದೆ.

ಸದ್ಯ ಅಮೆರಿಕದಲ್ಲಿ 17 ಲಕ್ಷ ಜನರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆ 1 ಲಕ್ಷ ದಾಟಿದೆ. ಈ ಕೇಸ್​ಗಳ ಪೈಕಿ 5 ಲಕ್ಷದಷ್ಟು ಕೇಸ್​ಗಳು 18-44ರ ವಯೋಮಾನದವರಲ್ಲಿ, 4.5 ಲಕ್ಷ ಕೇಸ್​ಗಳು 45-64 ವರ್ಷದವರಲ್ಲಿ ಕಾಣಿಸಿಕೊಂಡಿದೆ. ಜಾಗತಿಕವಾಗಿ ಕರೊನಾ ಸೋಂಕು 56 ಲಕ್ಷ ಜನರಿಗೆ ತಗುಲಿದ್ದು, 3.56 ಲಕ್ಷ ಜನ ಮೃತಪಟ್ಟಿದ್ದಾರೆ. (ಏಜೆನ್ಸೀಸ್)