ನ್ಯೂಸ್

ಕರೊನಾದ ಮೂಲ ಚೀನಾ ಹೌದೋ ಅಲ್ಲವೋ: ಅಮೆರಿಕ ನಡೆಸಲಿದೆ ತನಿಖೆ; ಮುಚ್ಚುಮರೆ ಮಾಡದಿರುವಂತೆ ಟ್ರಂಪ್ ತಾಕೀತು

ವಾಷಿಂಗ್ಟನ್: ಜಗತ್ತನ್ನು ತಲ್ಲಣಗೊಳಿಸಿರುವ ಕರೊನಾ ವೈರಸ್ ಚೀನಾದ ವುಹಾನ್‌ನ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದ್ದು ನಿಜವೋ ಸುಳ್ಳೋ ಎನ್ನುವುದನ್ನು ಪರಿಶೀಲಿಸಲು ಅಮೆರಿಕವೇ ಖುದ್ದಾಗಿ ತನಿಖೆ ನಡೆಸಲಿದೆ.

ಈ ವಿಚಾರದಲ್ಲಿ ಚೀನಾ ತನಗೆ ಗೊತ್ತಿರುವ ವಿಚಾರವನ್ನು ಮುಚ್ಚುಮರೆಯಿಲ್ಲದೆ ತಿಳಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ತಾಕೀತು ಮಾಡಿದ್ದಾರೆ.

ಕರೊನಾ ವೈರಸ್ ಮೂಲ ಇನ್ನೂ ರಹಸ್ಯವಾಗಿಯೇ ಉಳಿದಿದೆ. ವೈರಸ್ ಪ್ರಾಕೃತಿಕವಾಗಿಯೇ ಹುಟ್ಟಿಕೊಂಡಿರುವ ಸಾಧ್ಯತೆಯಿದೆ ಎಂಬುದಾಗಿ ಅಮೆರಿಕದ ಬೇಹುಗಾರಿಕೆ ಇಲಾಖೆ ಅಭಿಪ್ರಾಯಪಟ್ಟಿದ್ದನ್ನು ಆಧರಿಸಿ ಸಶಸ್ತ್ರ ಪಡೆಗಳ ಜಂಟಿ ಮುಖ್ಯಸ್ಥ (ಸಿಡಿಎಸ್) ಜನರಲ್ ಮಾರ್ಕ್ ಮಿಲ್ಲೆ ಮಂಗಳವಾರ ಹೇಳಿಕೆ ನೀಡಿದ್ದರು. ಈಗ ಟ್ರಂಪ್ ಅದಕ್ಕೆ ತದ್ವಿರುದ್ಧವಾಗಿ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

ಕರೊನಾ ವೈರಸ್ ವುಹಾನ್‌ನ ಪ್ರಯೋಗಾಲಯವೊಂದರಲ್ಲಿ ಸೃಷ್ಟಿಯಾಗಿದೆ ಎಂದು ಫಾಕ್ಸ್ ನ್ಯೂಸ್ ಬುಧವಾರ ವರದಿ ಮಾಡಿತ್ತು. ಆದರೆ ಅದು ಜೈವಿಕ ಅಸ್ತ್ರವಲ್ಲ. ಬದಲಿಗೆ ವೈರಸ್‌ಗಳನ್ನು ಗುರುತಿಸುವ ಮತ್ತು ಅದರ ವಿರುದ್ಧ ಹೋರಾಡುವ ತನ್ನ ಸಾಮರ್ಥ್ಯ ಅಮೆರಿಕದ ಸಾಮರ್ಥ್ಯಕ್ಕೆ ಸಮಾನವಾದುದು ಅಥವಾ ಅದಕ್ಕಿಂತಲೂ ಹೆಚ್ಚಿನದು ಎಂಬುದನ್ನು ತೋರಿಸುವುದೇ ಚೀನಾದ ಉದ್ದೇಶ ಎಂದು ಅದು ಹೇಳಿತ್ತು. ಫಾಕ್ಸ್ ನ್ಯೂಸ್ ಹಾಗೂ ಇತರ ವರದಿಗಳ ಪ್ರಕಾರ, ವುಹಾನ್ ಲ್ಯಾಬೊರೇಟರಿಯಲ್ಲಿ ವೈರಾಣುಗಳ ಪ್ರಯೋಗ ನಡೆಯುತ್ತಿದ್ದು, ಅಲ್ಲಿನ ಸುರಕ್ಷತಾ ಕ್ರಮಗಳ ಲೋಪದಿಂದಾಗಿ ಯಾರೋ ಒಬ್ಬರು ಸೋಂಕಿತರಾಗಿದ್ದಾರೆ. ಆ ರೀತಿ ಸೋಂಕಿತರಾದ ವ್ಯಕ್ತಿ ಮಾಂಸ ಮಾರಾಟ ಕೇಂದ್ರದ ಬಳಿ ಕಾಣಿಸಿಕೊಂಡಿದ್ದು ಅಲ್ಲಿಂದ ವೈರಸ್ ಹರಡಲು ಆರಂಭವಾಯಿತು ಎನ್ನಲಾಗಿದೆ. (ಏಜೆನ್ಸೀಸ್​)