ಬೆಳಗಾವಿ: ನೆರೆಯಿಂದ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿದ್ದ ರೈತಾಪಿ ವರ್ಗ ಅದರಿಂದ ಚೇತರಿಸಿಕೊಳ್ಳುವ ಮುನ್ನವೇ ಇದೀಗ ಕರೊನಾ ಒಕ್ಕರಿಸಿದ್ದು, ಅನ್ನದಾತನ ಬದುಕನ್ನು ಮತ್ತಷ್ಟು ಅತಂತ್ರವಾಗಿಸಿದೆ.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭೀಕರ ಪ್ರವಾಹದಿಂದಾಗಿ 23 ಜಿಲ್ಲೆಗಳ 103 ತಾಲೂಕಿನ ವ್ಯಾಪ್ತಿಯಲ್ಲಿ ಅಂದಾಜು 6.20 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಹಾನಿ ಸಂಭವಿಸಿದೆ. ಪರಿಣಾಮ 6.47 ಲಕ್ಷ ರೈತರು ಬೆಳೆ ನಷ್ಟ ಎದುರಿಸುತ್ತಿದ್ದಾರೆ. ಆದರೆ, ಪ್ರವಾಹದಿಂದ ಬೆಳೆಹಾನಿಯಾಗಿ 10 ತಿಂಗಳು ಕಳೆದಿದ್ದರೂ ಲಕ್ಷಕ್ಕೂ ಅಧಿಕ ರೈತರಿಗೆ ಪರಿಹಾರ ಬಿಡುಗಡೆ ಆಗಿಲ್ಲ. ವಿವಿಧ ಜಿಲ್ಲೆಗಳಲ್ಲಿ ದಾಖಲೆಗಳ ಸಮಸ್ಯೆ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು, ಪರಿಹಾರ ಪಟ್ಟಿಯಲ್ಲಿನ ಹೆಸರು, ಬ್ಯಾಂಕ್ ಖಾತೆಯಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು ಸೇರಿ ವಿವಿಧ ಕಾರಣಗಳಿಂದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಲೋಪಗಳ ಕುರಿತು ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ತಡೆಹಿಡಿಯಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೈತರ ಆಕ್ರೋಶ: ರೈತರಿಗೆ ತಲಾ 2 ಹಕ್ಟೇರ್ವರೆಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ಹಾನಿ ಸಂಭವಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಅಂದಾಜು ಹಾನಿ ವರದಿ ಸಲ್ಲಿಸಿರುವ ಪರಿಣಾಮ ಯಾವುದೇ ರೈತನಿಗೆ 2 ಹೆಕ್ಟೇರ್ವರೆಗೆ ಪರಿಹಾರ ಸಿಗುತ್ತಿಲ್ಲ. ಬದಲಾಗಿ ಒಂದು ಹೆಕ್ಟೇರ್, ಇಲ್ಲವೆ 1.5 ಹೆಕ್ಟೇರ್ವರೆಗೆ ಪರಿಹಾರ ಸಿಗುತ್ತಿದೆ. ಇದೀಗ ಲಾಕ್ಡೌನ್ನಿಂದ ಬೆಳೆದ ಬೆಳೆಗಳು ಮಾರಾಟವಾಗದೆ ಹೊಲದಲ್ಲಿಯೇ ಕೊಳೆಯುತ್ತಿದೆ. ಪರಿಣಾಮ ಲಾಕ್ಡೌನ್ನಿಂದ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 100 ಕೋಟಿ ರೂ.ಗಿಂತ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಜುನಾಥ ಕೋಳಿಗುಡ್ಡ