ಬೆಂಗಳೂರು: ‘‘ಮಾನವೀಯ ದೃಷ್ಟಿಯಿಂದ ಲಾಠಿ ಬಳಸುವುದು ಬೇಡವೆಂದು ಪೊಲೀಸರಿಗೆ ಸೂಚಿಸಿದ್ದೆ. ಆದರೆ, ಕರೊನಾ ಮಹಾಮಾರಿ ತಂದೊಡ್ಡಿರುವ ಕಂಟಕವನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿವಿಧ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದರೂ ಜನ ಅನಗತ್ಯವಾಗಿ ಸುತ್ತಾಡುವುದನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಮಂಗಳವಾರದಿಂದ ಲಾಕ್ಡೌನ್ ಇನ್ನಷ್ಟು ಬಿಗಿಗೊಳಿಸುತ್ತಿದ್ದೇವೆ. ಬಂದೋಬಸ್ತ್ ಹೆಚ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದೇವೆ. ಆದರೆ, ಕಾನೂನು ಪಾಲಿಸುವ ನಾಗರಿಕರಿಗೆ, ಅಮಾಯಕರಿಗೆ ಬಿಗಿ ದಿಗ್ಬಂಧನದಿಂದ ತೊಂದರೆ ಆಗದಂತೆ ಸರ್ಕಾರ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಎಂತಹುದೇ ಪರಿಸ್ಥಿತಿಯಲ್ಲೂ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಲು ಅವಕಾಶ ನೀಡುವುದಿಲ್ಲ...’
ಕಾರ್ವಿುಕ ವರ್ಗ ಹಾಗೂ ನಿರ್ಗತಿಕರು ಬಹಳ ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಸರ್ಕಾರ ಯಾವ ರೀತಿ ನೆರವು ನೀಡಲಿದೆ?
ಹೌದು ಸರ್ಕಾರಕ್ಕೆ ಅದರ ಅರಿವಿದೆ. ಈಗ 1 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲುವುದಕ್ಕೆ ಬಿಡುವುದಿಲ್ಲ ಎಂಬ ಭರವಸೆ ನೀಡುತ್ತೇನೆ. ಎಷ್ಟೇ ಕಷ್ಟವಾದರೂ ಇವರೊಂದಿಗೆ ಸರ್ಕಾರ ನಿಲ್ಲುತ್ತದೆ.
ಉದ್ಯಮಿಗಳು ಜಿಎಸ್ಟಿ ರಿಫಂಡ್, ದುಡಿಯುವ ಬಂಡವಾಳ, ಕಾರ್ವಿುಕರು ಸೇರಿ ಕೇಂದ್ರ ಹಾಗೂ ರಾಜ್ಯದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನು ಹೇಗೆ ಈಡೇರಿಸುತ್ತೀರಿ?
ಹೌದು ಅದರ ಅರಿವಿದೆ. ಉದ್ಯಮಿಗಳಿಗೆ ರಾಜ್ಯ ಹಾಗೂ ಕೇಂದ್ರದಿಂದ ಏನೇನು ಸೌಲಭ್ಯ ಕಲ್ಪಿಸಬಹುದು, ಹೇಗೆ ಅನುಕೂಲ ಮಾಡಬಹುದು ಎಂಬ ಬಗ್ಗೆ ಆಲೋಚಿಸಲಾಗುತ್ತದೆ. ಆದರೆ ಅದಕ್ಕಿಂತ ಮುಖ್ಯವಾಗಿ ಕಾರ್ವಿುಕರ ಪ್ರಶ್ನೆ ನಮ್ಮ ಮುಂದೆ ದೊಡ್ಡದಾಗಿದೆ. ಬೀದಿ ಪಾಲಾಗಿರುವ ಕಾರ್ವಿುಕರಿಗೆ ನೆರವಾದ ನಂತರ ಉಳಿದವರ ಬಗ್ಗೆ ಆಲೋಚಿಸಲಾಗುವುದು. ಆದರೆ ಉದ್ಯಮಿಗಳನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ನೆರವಾಗಲು ಹಣಕಾಸಿನ ಇತಿಮಿತಿ ಬಹಳ ಮುಖ್ಯ.
ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನಡುವೆ ಹೊಂದಾಣಿಕೆ ಹೇಗಿದೆ?
ಎಲ್ಲ ಜಿಲ್ಲೆಗಳಲ್ಲಿ ಡಿಸಿಗಳು, ಎಸ್ಪಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರಿಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು. ಅವರೆಲ್ಲರ ಪ್ರಯತ್ನದ ಫಲದಿಂದಲೇ ಕರೊನಾ ನಿಯಂತ್ರಣದಲ್ಲಿದೆ.
ಲಾಕ್ಡೌನ್ ಇದ್ದರೂ ಬಿಗಿಯಾಗಿಲ್ಲ,
ಸರ್ಕಾರದ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ? ಪೊಲೀಸರಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುತ್ತೀರಾ?
ಕರೊನಾ ನಿಯಂತ್ರಣಕ್ಕೆ ಬರಬೇಕೆಂದರೆ ಲಾಕ್ಡೌನ್ ಬಿಗಿಯಾಗಿರಬೇಕು. ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವುದು ಅನಿವಾರ್ಯವಾಗಿದೆ. ಮಂಗಳವಾರದಿಂದ ಅನಗತ್ಯವಾಗಿ ಓಡಾಟ ಮಾಡುವವರ ವಾಹನಗಳನ್ನು ವಶಕ್ಕೆ ಪಡೆಯಲು ಹೇಳಿದ್ದೇನೆ. ಮಾನವೀಯ ದೃಷ್ಟಿಯಿಂದ ಲಾಠಿ ಬಳಸುವುದು ಬೇಡವೆಂದು ಹಿಂದೆ ಹೇಳಿದ್ದೆ. ಆದರೆ ಪ್ರತಿಪಕ್ಷಗಳು ಸಹ ಲಾಠಿ ಬಳಸಿದರೆ ಮಾತ್ರ ಜನ ಮಾತು ಕೇಳುತ್ತಾರೆ ಎಂಬ ಅಭಿಪ್ರಾಯ ನೀಡಿವೆ. ಆದ್ದರಿಂದ ಬಿಗಿ ಬಂದೋಬಸ್ತ್ಗೆ
ಸೂಚನೆ ನೀಡಿದ್ದೇನೆ. ಜನ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬಂದು ಉಳಿದ ಸಮಯ ಮನೆಯಲ್ಲಿಯೇ ಇರಬೇಕು. ಹೊರಗಡೆ ಬಂದಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮರೆಯಬಾರದು.
ಸಾಕಷ್ಟು ಔಷಧ ದಾಸ್ತಾನು ಮಾಡಿಕೊಂಡಿದ್ದೀರಾ? ವೆಂಟಿಲೇಟರ್ ಸರಿಯಾಗಿ ವ್ಯವಸ್ಥೆ ಮಾಡಿಲ್ಲವೆಂಬ ದೂರುಗಳಿವೆಯಲ್ಲ?
ಸಾಕಷ್ಟು ಔಷಧ ದಾಸ್ತಾನು ಇದೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. 53040 ಸುರಕ್ಷಾ ಕಿಟ್ಗಳಿವೆ, ಇನ್ನೂ ಹೆಚ್ಚಿನ ಕಿಟ್ಗಳಿಗೆ ಆದೇಶ ನೀಡಿದ್ದೇವೆ. 2.39 ಲಕ್ಷ ಎನ್ 95 ಮಾಸ್ಕ್ಗಳಿವೆ, ಇನ್ನೂ ಆದೇಶ ನೀಡಿದ್ದೇವೆ. ಮೂರು ಪದರದ ಮಾಸ್ಕ್ಗಳು 6.39 ಲಕ್ಷ ದಾಸ್ತಾನು ಇದ್ದು, ಇನ್ನೂ ಸಾಕಷ್ಟು ಮಾಸ್ಕ್
ಗಳಿಗೆ ಆದೇಶ ನೀಡಿದ್ದೇವೆ. ಟೆಸ್ಟಿಂಗ್ ಕಿಟ್ 1 ಲಕ್ಷಕ್ಕೆ ಆದೇಶ ನೀಡಿದ್ದೇವೆ. ಸ್ಯಾನಿಟೈಸರ್ ಮಾಡಿಕೊಡಲು 65 ಕಾರ್ಖಾನೆಗಳೊಂದಿಗೆ ಮಾತುಕತೆ ನಡೆದಿದೆ. ಪ್ರತಿ ನಿತ್ಯ 50 ಸಾವಿರ ಲೀಟರ್ ಮಾಡಿಕೊಡಲಿವೆ. ಆದರೆ ಈ ಸದ್ಯಕ್ಕೆ 25 ಸಾವಿರ ಲೀಟರ್ ನೀಡುತ್ತಿವೆ. 7000ಕ್ಕೂ ಅಧಿಕ ಹಾಸಿಗೆಗಳನ್ನು ಕಾಯ್ದಿರಿಸಿದ್ದೇವೆ. 324 ವೆಂಟಿಲೇಟರ್ ಖರೀದಿಗೆ ಆದೇಶ ನೀಡಲಾಗಿದೆ.
ಕರೊನಾ ವಾರಿಯರ್ಸ್ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅವರಿಗೆ ಏನಾದರೂ ವಿಶೇಷ ಪ್ರೋತ್ಸಾಹಧನ ನೀಡುವಿರಾ?
ಇದೊಂದು ಒಳ್ಳೆಯ ಸಲಹೆ, ಈ ಬಗ್ಗೆ ಆಲೋಚಿಸಿರಲಿಲ್ಲ. ಪೌರ ಕಾರ್ವಿುಕರು, ಡಾಕ್ಟರ್ಸ್, ನರ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿಶೇಷ ಪ್ರೋತ್ಸಾಹಧನ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಹಣಕಾಸು ಇಲಾಖೆಯ ಜತೆಗೂ ರ್ಚಚಿಸಿ ಹಣಕಾಸಿನ ಇತಿಮಿತಿಯಲ್ಲಿ ಏನು ಮಾಡಬೇಕು ಎಂಬುದನ್ನು ತೀರ್ವನಿಸುತ್ತೇನೆ.
ನೆರೆ ರಾಜ್ಯದ ರೋಗಿಗಳು ರಾಜ್ಯದ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿದ್ದಾರೆ?
ನೆರೆ ರಾಜ್ಯದ ಗಡಿಗಳನ್ನು ನಾವು ಮುಚ್ಚಿರುವುದು ನಿಜ. ಕರೊನಾ ರೋಗಿಗಳು ನೆರೆ ರಾಜ್ಯದಿಂದ ನಮ್ಮಲ್ಲಿಗೆ ಚಿಕಿತ್ಸೆಗೆ ಬರಲು ಅವಕಾಶ ನೀಡಲ್ಲ. ಆದರೆ ಕರೊನಾ ಹೊರತು ಬೇರೆ ಕಾಯಿಲೆಯ ರೋಗಿಗಳು ನಮ್ಮ ಆಸ್ಪತ್ರೆಗಳಿಗೆ ಅವಲಂಬಿತರಾಗಿದ್ದರೆ ಮಾತ್ರ ಅಂತಹವರಿಗೆ ಅವಕಾಶ ನೀಡಲಾಗುವುದು. ಕರೊನಾ ರೋಗಿಗಳಿಗೆ ಅವಕಾಶ ಇಲ್ಲ.
ಲಾಕ್ಡೌನ್ ಎಷ್ಟು ದಿನ ಮುಂದುವರಿಯುವುದೋ ಎಂಬ ಚಿಂತೆಯಿಂದ ದಿನಸಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರಲ್ಲ?
ನಮ್ಮಲ್ಲಿ ದಿನಸಿ ಕೊರತೆ ಇಲ್ಲ, ಸಾಕಷ್ಟು ದಾಸ್ತಾನು ಇದೆ. ಆದ್ದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ. ಮನೆ ಬಾಗಿಲಿಗೆ ತರಕಾರಿ, ಹಣ್ಣು ತಂದು ಮಾರಾಟ ಮಾಡುತ್ತಾರೆ. ಮಾರುಕಟ್ಟೆಗಳಲ್ಲಿ ಮುಗಿಬೀಳುವ ಅಗತ್ಯ ಇಲ್ಲ.
ಅಲ್ಪಸಂಖ್ಯಾತರಿಗೆ ಆತಂಕ ಬೇಡ
ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಶಾಸಕರ ಜತೆ ಸಭೆ ಮಾಡಿದ್ದೇನೆ. ಆ ಸಮುದಾಯ ಸರ್ಕಾರದ ಜತೆ ನಿಂತಿದೆ. ಸಾಮೂಹಿಕ ನಮಾಜ್ ನಿಲ್ಲಿಸಿದ್ದಾರೆ. ಆ ಸಮುದಾಯವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಆ ಸಮುದಾಯದ ವಿರುದ್ಧ ಅಪಪ್ರಚಾರವನ್ನೂ ಮಾಡಬಾರದು. ನಮ್ಮ ಪಕ್ಷದ ಕೆಲ ಸಂಸದರಿಗೂ ಕರೆದು ಎಚ್ಚರಿಕೆ ನೀಡಿದ್ದೇನೆ. ಕೋಮು ಸೌರ್ಹಾತೆಯನ್ನು ನಾವು ಕಾಪಾಡಬೇಕಿದೆ. ಅಲ್ಪಸಂಖ್ಯಾತರ ವಿರುದ್ಧ ಯಾರೇ ಟೀಕೆ ಮಾಡಲಿ, ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಪೋಸ್ಟ್ ಮಾಡಲಿ ಅಂತಹವರ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತೇನೆ. ದೆಹಲಿಯ ಧಾರ್ವಿುಕ ಸಭೆಗೆ ಹೋಗಿ ಬಂದವರು ಕರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ.
ಏಪ್ರಿಲ್ 14 ರ ನಂತರ ಲಾಕ್ಡೌನ್ ಇರುತ್ತದೆಯೋ, ಇಲ್ಲವೋ?
ಉಳಿದ ಎಂಟು ದಿನಗಳಲ್ಲಿ ಜನ ಹೇಗೆ ವರ್ತನೆ ಮಾಡುತ್ತಾರೆ ಎಂಬುದರ ಆಧಾರದಲ್ಲಿ ಮುಂದಿನ ತೀರ್ಮಾನ ಮಾಡಲಾಗುತ್ತದೆ. ಏ. 14ರ ನಂತರ ಲಾಕ್ಡೌನ್ ಮುಂದುವರಿಯ ಬಾರದು ಎಂಬುದಾದರೆ ಜನ ಸರ್ಕಾರದೊಂದಿಗೆ ಸಹಕಾರ ನೀಡಬೇಕಾಗುತ್ತದೆ. ಕರೊನಾ ಸೋಂಕು ಸಮುದಾಯದಲ್ಲಿ ಹರಡಿದರೆ ನಿಯಂತ್ರಣ ತಪು್ಪತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪೌರ ಕಾರ್ವಿುಕರು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಸಾಕು.
ರುದ್ರಣ್ಣ ಹರ್ತಿಕೋಟೆ