ನ್ಯೂಸ್

ಕೋವಿಡ್​ ಸೋಂಕಿತ ಪವಾಡ ಪುರುಷ ಹಾಲಸ್ವಾಮೀಜಿ ನಿಧನ

ಶಿವಮೊಗ್ಗ: ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮಿತಿಮೀರಿದೆ. ಸಾವು-ನೋವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಪುಟ್ಟಮಕ್ಕಳಿಂದ ಹಿಡಿದು ವೃದ್ಧರನ್ನೂ ಬಿಟ್ಟಿಲ್ಲ ಮಹಾಮಾರಿ ಕರೊನಾ. ಈ ಸೋಂಕು ಇದೀಗ ಸ್ವಾಮೀಜಿಯೊಬ್ಬರನ್ನು ಬಲಿ ಪಡೆದಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಶಿವೈಕ್ಯರಾಗಿದ್ದಾರೆ. ಇವರು ಪವಾಡ ಪುರುಷ ಹಾಲಸ್ವಾಮಿ ಎಂದೇ ಚಿರಪರಿಚಿತರಾಗಿದ್ದರು.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿ ಸಮೀಪದ ರಾಂಪುರ ಮಹಾಸಂಸ್ಥಾನದ ಹಾಲಸ್ವಾಮಿ ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿಗೆ ತುತ್ತಾಗಿದ್ದ ಶ್ರೀಗಳು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ‌ ಇಂದು(ಬುಧವಾರ) ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಹಾಲಸ್ವಾಮೀಜಿ ಅವರನ್ನು ಆ ಭಾಗದ ಭಕ್ತರು ಪವಾಡ ಪುರುಷ ಎಂದೇ ನಂಬಿದ್ದರು. ದಾವಣಗೆರೆ, ಶಿವಮೊಗ್ಗ ಮಾತ್ರವಲ್ಲದೆ ಹಲವೆಡೆ ಅಪಾರ ಭಕ್ತ ಸಮೂಹವನ್ನು ಅವರು ಹೊಂದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ಹೋಗುವಂತೆ ಭಕ್ತರು ಮನವಿ ಮಾಡಿದರೂ ಒಪ್ಪಿರಲಿಲ್ಲ. ಆದರೆ ಎರಡು ದಿನಗಳ ಹಿಂದಷ್ಟೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

ಹಾಲಸ್ವಾಮೀಜಿ ಜತೆಗೆ ಅವರ ಕಾರು ಚಾಲಕನಿಗೂ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಇಬ್ಬರು ಅಂದೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಡ್ರೈವರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.