ನ್ಯೂಸ್

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್​ಗೆ ಕರೊನಾ ನೆಗೆಟಿವ್

ಬೆಂಗಳೂರು: ಐದು ದಿನಗಳಿಂದ ಹೋಂ ಕ್ವಾರಂಟೈನ್​ನಲ್ಲಿದ್ದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಕರೊನಾ ನೆಗೆಟಿವ್ ಬಂದಿದೆ.

ಜು.17ರಂದು ಭಾಸ್ಕರ್​ರಾವ್ ಅವರ ಕಾರು ಚಾಲಕನಿಗೆ ಕೋವಿಡ್​ ಸೋಂಕು ದೃಢಪಟ್ಟಿತ್ತು. ಆಯುಕ್ತರು ಅಂದಿನಿಂದ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದರು. ನಿನ್ನೆ(ಸೋಮವಾರ) ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು ಬೆಳಗ್ಗೆ ಬಂದ ವರದಿಯಲ್ಲಿ ನೆಗೆಟಿವ್ ಎಂದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮೂಲಕ ಆಯುಕ್ತರು ತಿಳಿಸಿದ್ದಾರೆ.

ಕರೊನಾ ಪರೀಕ್ಷೆಗೆ ಒಳಗಾಗಿರುವ ಚಿತ್ರವೊಂದನ್ನು ಟ್ವಿಟರ್​ನಲ್ಲಿ ಇಂದು ಬೆಳಗ್ಗೆ ಅಪ್ಲೋಡ್​ ಮಾಡಿರುವ ಭಾಸ್ಕರ್ ರಾವ್​, “ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ಇಂದಿನಿಂದ ಕೆಲಸಕ್ಕೆ ಹಾಜರಾಗುವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಹೋಂ ಕ್ವಾರಂಟೈನ್​ನಲ್ಲಿದ್ದರೂ ಭಾಸ್ಕರ್ ರಾವ್​ ಮನೆಯಿಂದಲೇ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿಗೆ ಅಗತ್ಯ ನಿದರ್ಶನ ನೀಡಿದ್ದರು. ಕಳೆದ ತಿಂಗಳಲ್ಲಿ ಒಟ್ಟು ಐದು ಬಾರಿ ಕರೊನಾ ಪರೀಕ್ಷೆಗೆ ಭಾಸ್ಕರ್​ ರಾವ್​ ಒಳಗಾಗಿದ್ದು, ಎಲ್ಲ ವರದಿಯೂ ನೆಗೆಟೆವ್​ ಬಂದಿದೆ.