ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಎಂಬ ಹೊಸ ಪ್ರಭೇದ ಪತ್ತೆಯಾದ ಬೆನ್ನಲ್ಲೇ ವಿಶ್ವದ ಹಲವು ರಾಷ್ಟ್ರಗಳು ಬೆಚ್ಚಿವೆ. ಡೆಲ್ಟಾ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿಯಾದ ಈ ಸೋಂಕು ತಡೆಗೆ ಅನೇಕ ದೇಶಗಳು ದಿಢೀರ್ ತುರ್ತು ಕ್ರಮ ಕೈಗೊಂಡಿವೆ. ಅಮೆರಿಕದ ನ್ಯೂಯಾರ್ಕ್ನಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅತ್ತ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ದಿಢೀರ್ ಸಭೆಯಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಮೇಲೆ ನಿಗಾ ಇಡುವ ಮಹತ್ವದ ತೀರ್ಮಾನ ಹೊರಬಿದ್ದಿದೆ.
ಅಮೆರಿಕ ತತ್ತರ: ಕರೊನಾ ಸೋಂಕಿನ ಪ್ರಕರಣ ಹಾಗೂ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿರುವುದರಿಂದ ನ್ಯೂಯಾರ್ಕ್ನಲ್ಲಿ ತುರ್ತು ಪರಿಸ್ಥಿತಿ ಹೇರಿ ರಾಜ್ಯಪಾಲೆ ಕ್ಯಾಥಿ ಹೊಚುಲ್ ಆದೇಶ ಹೊರಡಿಸಿದ್ದಾರೆ. ನ್ಯೂಯಾರ್ಕ್ನಾದ್ಯಂತ 2022ರ ಜ.15ರವರೆಗೆ ಎಮರ್ಜೆನ್ಸಿ ಜಾರಿಯಲ್ಲಿರುತ್ತದೆ. ಕಳೆದ ವರ್ಷದ ಏಪ್ರಿಲ್ನಿಂದೀಚೆಗೆ ಇದೇ ಮೊದಲ ಬಾರಿಗೆ ಸೋಂಕು ಹರಡುವ ದರ ಆತಂಕಕಾರಿ ರೀತಿಯಲ್ಲಿ ಏರುತ್ತಿದೆ. ಕಳೆದ ಒಂದು ತಿಂಗಳಿಂದ ಪ್ರತಿ ದಿನ ಸುಮಾರು 300ಕ್ಕೂ ಹೆಚ್ಚು ಕರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಪ್ರಯಾಣಿಕರಲ್ಲಿ ವೈರಸ್: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅನೇಕ ವಿಮಾನ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ನೆದರ್ಲ್ಯಾಂಡ್ಸ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಹೊಸ ಪ್ರಭೇದ ಒಮಿಕ್ರಾನ್ ಇದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಯುತ್ತಿವೆ. ಆಮ್್ಟರ್ಡಾಂನ ಷಿಫೋಲ್ ಏರ್ಪೋರ್ಟ್ಗೆ 600 ಪ್ರಯಾಣಿಕರು ಶುಕ್ರವಾರ ಬಂದಿಳಿದಿದ್ದರು. ಹೊಸ ಪ್ರಭೇದ ಕುರಿತ ಆತಂಕದಿಂದಾಗಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, 85 ಜನರು ಕರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ.
ವಿಮಾನ ಪ್ರಯಾಣ ನಿಷೇಧ: ಆಸ್ಟ್ರಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್, ಅಮೆರಿಕ ದಕ್ಷಿಣ ಆಫ್ರಿಕಾ ಮೇಲೆ ಪ್ರಯಾಣ ನಿಷೇಧ ಹೇರಿದ್ದರೆ, ಆಫ್ರಿಕಾ ಖಂಡದ 6 ದೇಶಗಳ ವಿಮಾನಯಾನಕ್ಕೆ ಓಮಾನ್, ಥಾಯ್ಲೆಂಡ್ , ಶ್ರೀಲಂಕಾ ಸೇರಿ ಅನೇಕ ರಾಷ್ಟ್ರಗಳು ನಿರ್ಬಂಧ ಹೇರಿವೆ.
ಎಲ್ಲೆಲ್ಲಿ ಹೊಸ ಸೋಂಕು?: ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ, ಇಸ್ವಾಟಿನಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.
ಒಮಿಕ್ರಾನ್ ನಾಮಕರಣ: ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಪತ್ತೆಯಾಗಿ ಜಗತ್ತನ್ನು ಮತ್ತೆ ಆತಂಕದ ಅಲೆಗೆ ತಳ್ಳಿರುವ ಕರೊನಾ ವೈರಸ್ನ ಹೊಸ ಪ್ರಭೇದ ಬಿ1.1.529ಕ್ಕೆ ‘ಒಮಿಕ್ರಾನ್’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೆಸರಿಸಿದ್ದು ಇದು ‘ಅತ್ಯಂತ ವೇಗವಾಗಿ ಹರಡುವ’ ಆತಂಕಕಾರಿ (ವಿಒಐ) ರೂಪಾಂತರಿ ಎಂದು ವರ್ಗೀಕರಿಸಿದೆ. ವೈರಸ್ ಪ್ರಭೇದಗಳ ನಾಮಕರಣಕ್ಕೆ ಗ್ರೀಕ್ ಅಕ್ಷರಮಾಲೆಯನ್ನು ಬಳಸುವ ಪದ್ಧತಿಯಂತೆ, ಶುಕ್ರವಾರ ನಡೆದ ಸಭೆಯಲ್ಲಿ ಹೊಸ ಪ್ರಭೇದಕ್ಕೆ ‘ಒಮಿಕ್ರಾನ್’ ಎಂದು ಹೆಸರಿಡಲಾಗಿದೆ.
ದಕ್ಷಿಣ ಆಫ್ರಿಕಾ ಆಕ್ರೋಶ: ಹೊಸ ತಳಿ ಪ್ರಸರಣ ತಡೆಯುವ ಕಾರಣ ಹೇಳಿ ವಿಶ್ವ ರಾಷ್ಟ್ರಗಳು ಹೇರುತ್ತಿರುವ ಪ್ರಯಾಣ ನಿಷೇಧವನ್ನು ದಕ್ಷಿಣ ಆಫ್ರಿಕಾ ಟೀಕಿಸಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳಿಗೆ ವಿರುದ್ಧವಾದದ್ದೆಂದು ಆಕ್ರೋಶ ವ್ಯಕ್ತಪಡಿಸಿದೆ.