ಮಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಕರೊನಾ ನಿರ್ಬಂಧಸೂತ್ರ ಇನ್ನು ಎಷ್ಟು ಸಮಯ ಮುಂದುವರಿಯಲಿದೆ ಎನ್ನುವುದನ್ನು ಈಗಲೇ ಹೇಳುವಂತಿಲ್ಲ, ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರ ಮುಂದುವರಿಸುವ ಅಥವಾ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೊನಾ ಕುರಿತ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾ.13ರಿಂದ ಒಂದು ವಾರ ರಾಜ್ಯದಲ್ಲಿ ಕರೊನಾ ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಮಾಲ್ಗಳು, ಚಿತ್ರಮಂದಿರ, ಮದುವೆ ಹಾಲ್ ಇತ್ಯಾದಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದನ್ನು ಮುಂದುವರಿಸಬೇಕೇ, ರದ್ದುಗೊಳಿಸಬೇಕೆ ಎಂಬ ಬಗ್ಗೆ ಈಗಲೇ ಹೇಳಲಾಗದು. ಮಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದ ಕಾಸರಗೋಡಿನ ವ್ಯಕ್ತಿಯಲ್ಲಿ ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳ ಹಾಗೂ ದಕ್ಷಿಣ ಕನ್ನಡದ ಸರ್ವೆಕ್ಷಣಾ ತಂಡ ಜಂಟಿಯಾಗಿ ರೋಗಿಯ ಸಂಪರ್ಕಕ್ಕೆ ಬಂದಿರುವಂಥವರನ್ನು ಗುರುತಿಸುವ ಕೆಲಸ ಕೈಗೊಂಡಿದ್ದಾರೆ ಎಂದರು.
ದಂಡ ಹಾಕಲು ಖಾದರ್ ಸಲಹೆ: ಕರೊನಾ ಮುನ್ನಚ್ಚರಿಕೆಗಾಗಿ ರಜೆ ಕೊಟ್ಟರೆ ಜನರು ಮಜಾ ಮಾಡುತ್ತಿದ್ದಾರೆ, ಮಂಗಳೂರಿನ ಎಲ್ಲ ಬೀಚ್ಗಳು ಜನರಿಂದ ತುಂಬಿದೆ, ಮನೆಯಿಂದ ಜನರು ಹೊರಬಾರದಂತೆ ಮಾಡಬೇಕು. ಬೀಚ್ಗಳಲ್ಲಿ ಜನರು ಬಂದರೆ ದಂಡ ಹಾಕಬೇಕು ಎಂದು ಮಾಜಿ ಸಚಿವ ಯು. ಟಿ.ಖಾದರ್ ಆಗ್ರಹಿಸಿದರು.
ಕರೊನಾ ಕಾರಣದಿಂದಾಗಿ ತಾಯ್ನಾಡಿಗೆ ಬರಲಾಗದೆ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ಕರೆತರಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ಕೇಂದ್ರದ ನೆರವಲ್ಲಿ ಅವರನ್ನು ಕರೆತರಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.
ಬೆಂಗಳೂರು: ಕರೊನಾ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಅಧಿಕೃತ, ಖಾಸಗಿ ವಿದೇಶ ಪ್ರವಾಸವನ್ನು ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ವಿದೇಶ ಪ್ರವಾಸಕ್ಕೆ ಒಪ್ಪಿಗೆ ಪಡೆದಿದ್ದರೂ ನಿಷೇಧಕ್ಕೆ ಒಳಪಡುತ್ತದೆ. ಮುಂದಿನ ಆದೇಶದ ತನಕ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.