ನವದೆಹಲಿ: ಸರ್ಕಾರ, ಪೊಲೀಸರು, ಆರೋಗ್ಯ ಸಿಬ್ಬಂದಿಯಿಂದ ಕ್ಷಣಕ್ಷಣವೂ ಎಚ್ಚರಿಕೆ, ಮುಂಜಾಗರೂಕತೆ ತೆಗೆದುಕೊಳ್ಳುವಂತೆ ಮಾಧ್ಯಮಗಳಲ್ಲಿ ಪ್ರತಿ ದಿನವೂ ಮಾಹಿತಿ... ಏನೇ ಹೇಳಿದರೂ, ಕಿವಿಯ ಮೇಲೆ ಹಾಕಿಸಿಕೊಳ್ಳದ ಕೆಲ ಜನರು ಒಂದೆಡೆಯಾದರೆ, ಉದ್ದೇಶಪೂರ್ವಕವಾಗಿ ಸೋಂಕು ಹರಡುತ್ತಿರುವವರು ಇನ್ನೊಂದೆಡೆ, ತಿಳಿದೋ, ತಿಳಿಯದೆಯೋ ಸೋಂಕಿತರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡವರು ಮತ್ತೊಂದೆಡೆ...
ಇದೇ ಕಾರಣಕ್ಕೆ ಇಂದು ಭಾರತದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿಬಿಟ್ಟಿದೆ. ನಿನ್ನೆ (ಸೋಮವಾರ) ಒಂದೇ ದಿನ ಭಾರತದಲ್ಲಿ 4970 ಹೊಸ ಸೋಂಕಿತರು ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ 1,01,139ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ 22ನೇ ದೇಶ ಎಂಬ ಹೆಗ್ಗಳಿಕೆ ಪಡೆದಿದ್ದ ಭಾರತವೀಗ 11ನೇ ಸ್ಥಾನಕ್ಕೆ ಏರಿಬಿಟ್ಟಿದೆ! ಕಳೆದ ಹದಿನೈದು ದಿನದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ.
ಪ್ರಥಮ ಸ್ಥಾನದಲ್ಲಿ ಅಮೆರಿಕ ಇದ್ದು , ಅಲ್ಲಿ 15,50,294 ಪ್ರಕರಣ ದಾಖಲಾಗಿದೆ. ನಂತರ ರಷ್ಯಾ (2,90,678), ಸ್ಪೇನ್ (2,78,188), ಬ್ರೆಜಿಲ್ (2,55,368), ಇಂಗ್ಲೆಂಡ್ (2,46,406), ಇಟಲಿ (2,25,886), ಫ್ರಾನ್ಸ್ (1,79,927), ಜರ್ಮನಿ (1,77,289), ಟರ್ಕಿ (1,50,593), ಇರಾನ್ (1,22,492) ಇದ್ದು ನಂತರದ್ದು ಭಾರತ. (ಚೀನಾದ ಸೋಂಕಿತರ ಸಂಖ್ಯೆಯ ಬಗ್ಗೆ ಇನ್ನೂ ಗುಮಾನಿ ಇದ್ದೇ ಇದೆ!). ಕರೊನಾ ಹಾಟ್ಸ್ಪಾಟ್ ಆಗಿದ್ದ ಇಂಗ್ಲೆಂಡ್, ಜರ್ಮನಿ, ಸ್ಪೇನ್ ಮತ್ತು ಇಟಲಿಯಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಇಳಿಕೆಮುಖದತ್ತ ಸಾಗಿದ್ದರೆ, ಭಾರತದಲ್ಲಿ ಈಗ ಏರಿಕೆಯಾಗುತ್ತಿದೆ. ಭಾರತದಲ್ಲಿ ನಿನ್ನೆಯ ವೇಳೆ ಒಟ್ಟೂ 3,029 ಜನರು ಮೃತಪಟ್ಟಿದ್ದಾರೆ.
ಫೆಬ್ರವರಿ 15ಕ್ಕೆ ಭಾರತದಲ್ಲಿ ಮೂರು ಪ್ರಕರಣಗಳು ಮಾತ್ರ ಇದ್ದವು. ಮೇ 6ರವರೆಗೆ ಸೋಂಕಿತರ ಸಂಖ್ಯೆ ಇದ್ದುದು 49,391 ಮಾತ್ರ. ಆದರೆ ನಂತರದ 12 ದಿನದಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡು, ಅಲ್ಲಿಂದ ಏರುಗತಿಯಲ್ಲಿ ಸಾಗುತ್ತಲೇ ಇದೆ.
ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರ ಅನ್ವಯ ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರ ಪೈಕಿ 7.1 ಮಂದಿಗೆ ಕರೊನಾ ಸೋಂಕು ಪತ್ತೆಯಾಗುತ್ತಿದೆ. ಜಾಗತಿಕ ಅಂಕಿ–ಅಂಶಕ್ಕೆ ಹೋಲಿಸಿದರೆ, ಇದು ತುಂಬಾ ಕಡಿಮೆ ಪ್ರಮಾಣ ಎಂದಿದೆ ಇಲಾಖೆ.
ವಿಶ್ವದಾದ್ಯಂತ ಇಲ್ಲಿವರೆಗೆ ಸುಮಾರು 45.25 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿವೆ. ಹೀಗಾಗಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 60 ಪ್ರಕರಣಗಳು ಇವೆ.