ನವದೆಹಲಿ: ಇಂದು (ಜುಲೈ 29) ವಿಶ್ವ ಹುಲಿ ದಿನ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ 2018ರ ಅಖಿಲ ಭಾರತ ಹುಲಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ರಾಜ್ಯವಾರು ಹಾಗೂ ಅಭಯಾರಣ್ಯವಾರು ಹುಲಿಗಳ ಸಂಖ್ಯೆಯನ್ನು ನೀಡಲಾಗಿದೆ.
ಇದರನ್ವಯ ದೇಶದಲ್ಲಿ 50 ಹುಲಿ ಸಂರಕ್ಷಿತ ತಾಣಗಳಿವೆ. ಇಲ್ಲಿರುವ ಹುಲಿಗಳ ಸಂಖ್ಯೆ 1,923. ಒಟ್ಟಾರೆ ಸಂಖ್ಯೆಯಲ್ಲಿ ಶೇ.65 ಹುಲಿಗಳು ಸಂರಕ್ಷಿತ ಅರಣ್ಯದಲ್ಲಿವೆ. ಈ ಪೈಕಿ ಮಿಜೋರಾಂನ ದಂಪಾ, ಪಶ್ಚಿಮ ಬಂಗಾಳದ ಬಕ್ಸಾ, ಹಾಗೂ ಜಾರ್ಖಂಡ್ನ ಪಾಲಮೌ ಸಂರಕ್ಷಿತ ಅರಣ್ಯದಲ್ಲಿ ಒಂದೂ ಹುಲಿಗಳಿಲ್ಲ..!
ಇದನ್ನೂ ಓದಿ; ಹುಲಿ ಗಣತಿಗೆ ಪಟ್ಟ ಪಾಡು ಎಂಥದ್ದು? ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯ್ತು 6.20 ಲಕ್ಷ ಮಾನವ ದಿನಗಳ ಶ್ರಮ
ಅತಿ ಹೆಚ್ಚು ಹುಲಿಗಳಿರುವ ಅಭಯಾರಣ್ಯವೆಂದರೆ ಉತ್ತರಾಖಂಡ್ನ ಕಾಬೆಟ್ ಹುಲಿ ಅಭಯಾರಣ್ಯ. ಇಲ್ಲಿ 231 ಹುಲಿಗಳಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ನಾಗರಹೊಳೆ ಹಾಗೂ ಬಂಡಿಪುರ ಅಭಯಾರಣ್ಯಗಳಿವೆ ಇಲ್ಲಿ ಕ್ರಮವಾಗಿ 126 ಹಾಗೂ 127 ಹುಲಿಗಳಿವೆ. ಇನ್ನೂ ಅಸ್ಸಾಂನ ಕಾಜಿರಂಗಾ ಹಾಗೂ ಮಧ್ಯಪ್ರದೇಶದ ಬಂದಾವ್ಘಡ್ನಲ್ಲಿ 104 ಹುಲಿಗಳನ್ನು ಗುರುತಿಸಲಾಗಿದೆ.
ದೇಶದಲ್ಲಿ ಒಟ್ಟು 2,967 ಹುಲಿಗಳಿದ್ದು, 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 524 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನೂ ಉತ್ತರಾಖಂಡ್ನಲ್ಲಿ 442 ಹುಲಿಗಳು ಕಂಡು ಬಂದಿವೆ. 2014ರಲ್ಲಿ 1,400 ಹುಲಿಗಳನ್ನು ಗುರುತಿಸಲಾಗಿತ್ತು.