ನ್ಯೂಸ್

ವಿಕಾಸ್​ ದುಬೆ ಮನೆಯಲ್ಲಿ ನಡೆದಿತ್ತು ಪೊಲೀಸರ ಔತಣಕೂಟ; ಬಳಸಿಕೊಂಡು ಕೊಂದರು ಎಂದ ಪತ್ನಿ ರಿಚಾ

ನಟೋರಿಯಸ್​ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯ ಎನ್​ಕೌಂಟರ್​ ಆಗಿ 12 ದಿನಗಳು ಕಳೆದಿವೆ. ಆತನ ಪತ್ನಿ ರಿಚಾ ದುಬೆ, ತನ್ನ ಪತಿಯ ಸಾವಿಗೆ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಕಾಸ್​ ದುಬೆಯನ್ನು ಮಧ್ಯಪ್ರದೇಸ ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಆತನನ್ನು ಉತ್ತರಪ್ರದೇಶಕ್ಕೆ ಕರೆತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್​ಕೌಂಟರ್​ ಮಾಡಲಾಗಿತ್ತು. ವಿಕಾಸ್​ ದುಬೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ರಿಚಾ ದುಬೆ ಅಂದು ಕಣ್ಣಲ್ಲಿ ನೀರು ಹಾಕಿದ್ದರು.

ಇದೀಗ ಸ್ಥಳೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಿಚಾ ದುಬೆ, ಕರೊನಾ ವೈರಸ್​ನಿಂದ ಲಾಕ್​ಡೌನ್​ ಆದ ಸಂದರ್ಭದಲ್ಲಿ ಹಲವು ಪೊಲೀಸ್​ ಸಿಬ್ಬಂದಿ ಬಿಕ್ರುವಿನಲ್ಲಿರುವ ವಿಕಾಸ್​ ದುಬೆಯ ಮನೆಗೆ ಬಂದು ಊಟ ಮಾಡಿದ್ದಾರೆ. ಭರ್ಜರಿ ಔತಣಕೂಟ ನಡೆಸಿದ್ದಾರೆ. ರಾತ್ರಿಯೆಲ್ಲ ಆ ಮನೆಯಲ್ಲಿ ಪಾರ್ಟಿ ಮಾಡುತ್ತ ತಂಗಿದವರೂ ಇದ್ದಾರೆ. ಪೊಲೀಸರು ವಿಕಾಸ್​ ದುಬೆಯನ್ನು ತಮಗೆ ಬೇಕಾದಂತೆ ಬಳಸಿಕೊಂಡು ಕೊನೆಗೆ ಅವನನ್ನು ಕೊಂದರು. ಆದರೂ ನನಗೆ ನ್ಯಾಯಾಂಗ, ಸಂವಿಧಾನದ ಮೇಲೆ ನಂಬಿಕೆಯಿದೆ. ನನ್ನ ಪತಿಯ ಸಾವಿಗೆ ನ್ಯಾಯ ಸಿಕ್ಕೇಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?

ಅಂದು ಎಂಟು ಪೊಲೀಸರನ್ನು ವಿಕಾಸ್​ ದುಬೆ ಗ್ಯಾಂಗ್​ ಕೊಂದ ದಿನ ರಾತ್ರಿ 2 ಗಂಟೆ ಹೊತ್ತಿಗೆ ವಿಕಾಸ್​ ನನಗೆ ಫೋನ್​ ಮಾಡಿದ್ದರು. ಬಿಕ್ರು ಗ್ರಾಮದಲ್ಲಿ ಪರಿಸ್ಥಿತಿ ಸರಿಯಿಲ್ಲ. ಲಖನೌನಿಂದ ನೀವು ಪರಾರಿಯಾಗಿ ಎಂದು ಹೇಳಿದ್ದರು. ಅವರು ಹೇಳಿದಂತೆ ನಾವು ನಮ್ಮ ಮನೆಯಿಂದ ಓಡಿಹೋದೆವು. ನನ್ನ ಸ್ನೇಹಿತಳೊಬ್ಬಳ ಮನೆಗೆ ಹೋದೆ. ಅಂದೇ ಕೊನೆ ಕಡೆಗೆ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಮಾಧ್ಯಮಗಳ ವರದಿಯಿಂದಲೇ ನನಗೂ ವಿಷಯ ಗೊತ್ತಾಗುತ್ತಿತ್ತು ಎಂದು ರಿಚಾ ತಿಳಿಸಿದ್ದಾರೆ.

ನನ್ನ ಪತಿ ಕ್ರಿಮಿನಲ್​ ಆಗಿದ್ದರಬಹುದು. ಆದರೆ ತುಂಬ ಒಳ್ಳೆಯ ಗಂಡನಾಗಿದ್ದ. ಮಕ್ಕಳಿಗೆ ಅತ್ಯುತ್ತಮ ತಂದೆಯಾಗಿದ್ದ. ಪ್ರತಿತಿಂಗಳೂ ನಮಗೆ 40,000 ರೂ.ಕಳಿಸಿಕೊಡುತ್ತಿದ್ದ. ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿಯಾಗಿತ್ತು. ನನ್ನ ಹಿರಿಯ ಮಗ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ. ಎರಡನೇ ಮಗ ಸೆಕೆಂಡ್ ಪಿಯುದಲ್ಲಿ ಶೇ.90 ಅಂಕ ಪಡೆದಿದ್ದಾನೆ ಎಂದು ಹೇಳಿದ್ದಾರೆ.

ನನಗೆ ವಿಕಾಸ್​ ದುಬೆ ಅಮ್ಮ ಅಂದರೆ ಅತ್ತೆಯೊಂದಿಗೆ ಅಷ್ಟು ಒಳ್ಳೆಯ ಸಂಬಂಧವಿಲ್ಲ. ಅವರೂ ಸಹ ವಿಕಾಸ್​ ದುಬೆಯನ್ನು ದೂರ ಇಟ್ಟಿದ್ದರು. ಆದರೂ ವಿಕಾಸ್​ಗೆ ತನ್ನ ಪಾಲಕರೆಂದರೆ ತುಂಬ ಪ್ರೀತಿಯಿತ್ತು ಎಂದು ಹೇಳಿದ್ದಾರೆ.(ಏಜೆನ್ಸೀಸ್​)