ಇಟಾನಗರ: ಕರೊನಾ ಮಹಾಮಾರಿಯಿಂದ ಬಚಾವ್ ಆಗಲು ಇಡೀ ದೇಶದ ಜನತೆ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆ. ಕೋವಿಡ್-19 ಯಾವುದೇ ಕಾರಣಕ್ಕೂ ಮತ್ತಷ್ಟು ಮಂದಿಗೆ ಹರಡಬಾರದು ಎಂಬ ಕಾರಣಕ್ಕೆ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಲಾಗಿದ್ದು, ನಮ್ಮ ಪೊಲೀಸ್ ಸಿಬ್ಬಂದಿ ಕೂಡ ಜನರನ್ನು ಆದಷ್ಟು ಮನೆಯಲ್ಲೇ ಉಳಿದುಕೊಳ್ಳುವಂತೆ ನಿಗಾವಹಿಸುತ್ತಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಣ್ಗಾವಲಾಗಿ ಅಖಾಡಕ್ಕೆ ಇಳಿದಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕುಟುಂಬದಿಂದ ದೂರ ಉಳಿದು ಪ್ರಾಣವನ್ನು ಪಣಕ್ಕಿಟ್ಟು ಯಾವುದೇ ರಾಜಿ ಸಂಧಾನ ಮಾಡಿಕೊಳ್ಳದೇ ಜನತೆಯ ಸುರಕ್ಷತೆಗೆ ಹಗಲಿರುಳು ದುಡಿಯುತ್ತಿದ್ದಾರೆ.
ಪೊಲೀಸರ ತ್ಯಾಗವನ್ನು ಗಮನಿಸಿದ 9 ವರ್ಷದ ಬಾಲಕಿಯೊಬ್ಬಳು ಮನೆಯಲ್ಲೇ ಉಳಿಯುವಂತೆ ದೇಶದ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾಳೆ. "ನನ್ನ ತಂದೆ ಓರ್ವ ಪೊಲೀಸ್ಮ್ಯಾನ್ ನಿಮಗೆ ಸಹಾಯ ಮಾಡಲು ನಮ್ಮಿಂದ ದೂರವಿದ್ದಾರೆ. ನೀವು ಮನೆಯಲ್ಲೇ ಉಳಿಯುವ ಮೂಲಕ ಅವರಿಗೆ ಸಹಾಯ ಮಾಡುವಿರಾ?", ಎಂಬ ಸಂದೇಶವಿರುವ ಭಿತ್ತಿಫಲಕವನ್ನು ಹಿಡಿದು ನಿಂತಿರುವ ಬಾಲಕಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಬಲವನ್ನು ಮೆಚ್ಚಿದ ಸಚಿವ ಕಿರಣ್ ರಿಜಿಜು
ಭಿತ್ತಿಫಲಕ ಹಿಡಿದಿರುವ ಬಾಲಕಿಯ ಫೋಟೋವನ್ನು ಅರುಣಾಚಲ ಪ್ರದೇಶದ ಸಂಸದ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೊಂದು ಭಾವನಾತ್ಮಕ ಮತ್ತು ಶಕ್ತಿಶಾಲಿ ಸಂದೇಶವಾಗಿದೆ. ಎಲ್ಲರ ಸುರಕ್ಷತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಎಲ್ಲರು ಮೆಚ್ಚಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)