ನ್ಯೂಸ್

ಪೊಲೀಸರ ಸ್ಥೈರ್ಯ ಕಸಿದ ಸರ್ಕಾರ: ಲಾಠಿಗಳನ್ನು ಬದಿಗಿಟ್ಟ ಆರಕ್ಷಕರು, ಜನರ ಓಡಾಟ ನಿರಾತಂಕ

ಬೆಂಗಳೂರು: ಕರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಜನ ಮನೆಯಿಂದ ಹೊರಗೆ ಬರುವುದು ಪೂರ್ಣಪ್ರಮಾಣದಲ್ಲಿ ನಿಂತರೆ ಕೇಂದ್ರ- ರಾಜ್ಯ ಸರ್ಕಾರಗಳ ಪ್ರಯತ್ನ ತಕ್ಕಮಟ್ಟಿಗೆ ಯಶಸ್ಸು ಗಳಿಸುವುದು ಸ್ಪಷ್ಟ. ಆದರೆ, ರಾಜಕಾರಣಿಗಳು ಮತ್ತು ಸಮಾಜದ ಸ್ಪಂದನೆಯಿಂದ ಲಾಕ್​ಡೌನ್ ಹಳ್ಳ ಹಿಡಿಯುತ್ತಿರುವುದು ಎದ್ದು ಕಾಣುತ್ತಿದೆ.

ಜನರನ್ನು ಮನೆ ಒಳಗೆ ಇರುವಂತೆ ನೋಡಿಕೊಳ್ಳಲು ಪೊಲೀಸರು ಕಠಿಣಹಾದಿ ತುಳಿದಿದ್ದು ದಿಟ. ಸುಖಾಸುಮ್ಮನೆ ಬೀದಿ ಸುತ್ತುವವರ ಮೇಲೆ ಲಾಠಿ ಬೀಸಿ ತಕ್ಕಮಟ್ಟಿಗೆ ತಹಬದಿಗೆ ತಂದಿದ್ದಾರೆ. ಇಷ್ಟರ ನಡುವೆ ಸರ್ಕಾರ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು ಅವರ ನೈತಿಕಸ್ಥೈರ್ಯ ಕುಗ್ಗುವಂತೆ ಮಾಡಿದೆ. ಲಾಠಿ ಬೀಸಬೇಡಿ, ಲಾಠಿ ಬೀಸಿದ್ದು ತಪು್ಪ ಎಂಬಿತ್ಯಾದಿ ಅಭಿಪ್ರಾಯ ಬರುತ್ತಿರುವುದರಿಂದ ಸರ್ಕಾರವೂ ಪೊಲೀಸರ ಕೈಕಟ್ಟಿಹಾಕಿದೆ. ಪರಿಣಾಮ ಶನಿವಾರ ರಸ್ತೆಯಲ್ಲಿ ಸ್ಪಷ್ಟವಾಗಿ ಕಾಣಿಸಿತು. ಪೊಲೀಸರು ಅಲ್ಲಲ್ಲಿ ಇದ್ದರೂ ತಮ್ಮ ಪಾಡಿಗೆ ತಾವಿದ್ದರು. ಜನರ ಓಡಾಟ ನಿರಾತಂಕವಾಗಿತ್ತು. ಈ ಬೆಳವಣಿಗೆ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ ಬಹುತೇಕ ನಗರ, ಪಟ್ಟಣಗಳಲ್ಲಿ ಕಾಣಿಸಿದೆ.

ಜಾಲತಾಣದಲ್ಲೂ ಪೊಲೀಸರ ಪರ ಮತ್ತು ವಿರೋಧ ಚರ್ಚೆ ನಡೆದಿವೆ. ಪೊಲೀಸರು ಹೊಡೆಯುವುದು ಸರಿಯಲ್ಲ, ತಾಳ್ಮೆಯಿಂದ ಹೇಳಬೇಕೆಂದು ಅನೇಕರು ಅಭಿಪ್ರಾಯ ನೀಡಿದ್ದಾರೆ. ಅಷ್ಟೇಪ್ರಮಾಣದಲ್ಲಿ ಪೊಲೀಸರ ಪರವಾಗಿ ವಾದ ಹೂಡಿದವರೂ ಇದ್ದಾರೆ. ಒಟ್ಟಾರೆ ಪೊಲೀಸ್ ಕೇಂದ್ರಿತ ಚರ್ಚೆ ನಡೆದಿದ್ದು, ಲಾಕ್ ಡೌನ್ ಯಶಸ್ವಿಯಾಗಲು ಪೊಲೀಸರ ಬಿಗಿ ಕ್ರಮ ಹೊರತು ಅನ್ಯ ಮಾರ್ಗವಿಲ್ಲ, ಜನ ಮಾತು ಕೇಳಲ್ಲ ಎಂಬ ವಾದವೂ ಬಲವಾಗಿದೆ. ಈ ನಡುವೆ ಸರ್ಕಾರ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೈತಿಕಸ್ಥೈರ್ಯ ಕುಸಿಯದಂತೆ ಮಾಡಬೇಕಾದ ಅನಿವಾರ್ಯತೆಯೂ ಇದೆ.

ಜನ ಪ್ರತಿನಿಧಿಗಳ ದ್ವಂದ್ವ ನಿಲುವು

ದಿನನಿತ್ಯ ಅಗತ್ಯ ವಸ್ತು ಖರೀದಿಗೆ ಅವಕಾಶಕ್ಕೆ ಅಡ್ಡಿಪಡಿಸಬೇಡಿ ಎಂದು ಪೊಲೀಸರಿಗೆ ತಾಕೀತು ಮಾಡುವ ಜನಪ್ರತಿನಿಧಿಗಳು, ಸಚಿವರು ‘ಪರಿಸ್ಥಿತಿ ನಿಯಂತ್ರಿಸಿ’ ಎಂದು ಮತ್ತೊಂದು ಕಡೆ ತಾಕೀತು ಮಾಡುತ್ತ ದ್ವಂದ್ವ ನಿಲುವು ತಾಳುತ್ತಿರುವುದು ಲಾಕ್​ಡೌನ್ ಪರಿಣಾಮಕಾರಿ ಆಗದಿರಲು ಕಾರಣ. ಕರೊನಾ ವೈರಸ್ ಸಮುದಾಯಕ್ಕೆ ವಿಸ್ತರಣೆಯಾಗುವ ಸಂದರ್ಭವಿದು. ಜನ ಎಷ್ಟು ಪ್ರಮಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾಣಿಸಿಕೊಳ್ಳುತ್ತಾರೋ ಅಷ್ಟು ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತದೆ ಎಂಬ ಅರಿವಿದ್ದರೂ ಕೇವಲ ಮಂತ್ರಿಗಳ ಹಿತಾಸಕ್ತಿಗೆ ಬೆಲೆ ತೆರುವಂತಾಗಿದೆ. ಇದು ಪೊಲೀಸರನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.