ನ್ಯೂಸ್

ಪ್ರವಾಹ ನಿಯಂತ್ರಣಕ್ಕೆ ಸಮನ್ವಯದ ಹೊಣೆಗಾರಿಕೆ; 23 ಇಲಾಖೆಗಳನ್ನು ಒಳಗೊಂಡ ಕ್ರಿಯಾ ಯೋಜನೆ

Webdesk - Ravikanth

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ಪದೇಪದೆ ಉಂಟಾಗುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ಕ್ರಿಯಾ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದ್ದು, ಜಿಲ್ಲಾಡಳಿತಗಳಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಪ್ರಕೃತಿ ವಿಕೋಪಕ್ಕೊಳಗಾಗುವ ಪ್ರದೇಶದಲ್ಲಿ ತಕ್ಷಣದ ಪರಿಹಾರಗಳೇನು? ಜಿಲ್ಲಾಡಳಿತಗಳು ಹೇಗೆ ಸಜ್ಜಾಗಿರಬೇಕಾಗಿದೆ ಎಂಬೆಲ್ಲ ಅಂಶಗಳನ್ನು ಕ್ರಿಯಾಯೋಜನೆ ಒಳಗೊಂಡಿದೆ. ಪ್ರಕೃತಿ ವಿಪತ್ತು ಮತ್ತು ಅವುಗಳ ನಿರ್ವಹಣೆಗೆ ಪ್ರಮುಖ ಆದ್ಯತೆ ನೀಡುವಂತೆ ಸೂಚಿಸಿದೆ.

23 ಇಲಾಖೆಗಳ ಜವಾಬ್ದಾರಿ: ಪ್ರಕೃತಿ ವಿಕೋಪ ನಿಯಂತ್ರಣ ಒಂದೆರಡು ಇಲಾಖೆಗಳಿಗೆ ಸಂಬಂಧಿಸಿದ್ದಲ್ಲ. 23 ಇಲಾಖೆಗಳು ಸಮನ್ವಯದಿಂದ ಈ ಕೆಲಸ ಮಾಡಬೇಕಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದರೂ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿದ್ದರೆ ಜನರಿಗೆ ಉಂಟಾಗುವ ಸಮಸ್ಯೆ ನಿವಾರಣೆ ಸಾಧ್ಯವಾಗುವುದಿಲ್ಲ. ಕ್ರಿಯಾ ಯೋಜನೆಯಲ್ಲಿ ಯಾವ ಇಲಾಖೆಯಿಂದ ಏನೇನು ಕೆಲಸ ಆಗಬೇಕಾಗಿದೆ ಎಂಬುದನ್ನಷ್ಟೇ ಹೇಳಿಲ್ಲ. ಪ್ರವಾಹಕ್ಕೆ ಕಾರಣಗಳೇನು? ಅದಕ್ಕೆ ಪರಿಹಾರಗಳೇನು? ಕಠಿಣ ನಿಯಮಗಳನ್ನು ಎಲ್ಲೆಲ್ಲಿ ರೂಪಿಸಬೇಕಾಗಿದೆ? ಪ್ರವಾಹದಲ್ಲಿ ಎಷ್ಟು ವಿಧಗಳಿವೆ ಎಂಬುದೆಲ್ಲವನ್ನೂ ವಿವರಿಸಲಾಗಿದೆ. ಅದರೊಂದಿಗೆ ವಿವಿಧ ಇಲಾಖೆಗಳ ಜವಾಬ್ದಾರಿಯನ್ನೂ ಮನವರಿಕೆ ಮಾಡಿಕೊಡಲಾಗಿದೆ.

ನಗರ ಪ್ರವಾಹ: ಯೋಜನಾರಹಿತವಾದ ಮಾನವ ಚಟುವಟಿಕೆಗಳಿಂದ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮಂಗಳೂರು, ಉಡುಪಿ ನಗರಗಳು ಪ್ರವಾಹಕ್ಕೆ ತುತ್ತಾಗುತ್ತಿವೆ.

ಕೆರೆಗಳೇ ಮಾಯ: ರಾಜ್ಯಾದ್ಯಂತ ಜಲಾನಯನ ಪ್ರದೇಶ ಒತ್ತುವರಿಯಾಗುತ್ತಿದ್ದು, 1000 ಕೆರೆಗಳು ಮಾಯವಾಗಿವೆ ಎಂಬುದನ್ನು ಉಲ್ಲೇಖಿಸಲಾಗಿದೆ. ರಾಜಕಾಲುವೆ, ಚರಂಡಿಗಳ ಸಾಮರ್ಥ್ಯ ಕಡಿಮೆ ಇದ್ದರೆ, ಇನ್ನೊಂದೆಡೆ ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯದಿರುವುದು, ನೀರು ಹರಿದು ಬರುವಂತಹ ಪ್ರದೇಶ ಒತ್ತುವರಿ ಆಗಿರುವುದು ಸಹ ಪ್ರವಾಹದ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದೆ.

ಬಿಲ್ಡಿಂಗ್ ಬೈಲಾ ಕಡ್ಡಾಯ ಅನುಷ್ಠಾನ: ಪ್ರವಾಹಪೀಡಿತ ಪ್ರದೇಶದಲ್ಲಿ ಬಿಲ್ಡಿಂಗ್ ಬೈಲಾವನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕಾಗಿರುವ ಅಗತ್ಯತೆಯನ್ನು ಕ್ರಿಯಾ ಯೋಜನೆ ಎತ್ತಿ ತೋರಿಸಿದೆ. ರಾಜಕಾಲುವೆಗಳು, ಚರಂಡಿಗಳೇ ಒತ್ತುವರಿಯಾಗಿವೆ. ಚರಂಡಿಗಿಂತ 6 ಮೀಟರ್ ದೂರದಲ್ಲಿ ಮನೆಗಳು ಇರಬೇಕು ಎಂಬ ನಿಯಮ ಜಾರಿಯಾಗಿಲ್ಲ. ಪ್ರವಾಹಪೀಡಿತ ಪ್ರದೇಶಗಳ ಡಿಜಿಟಲ್ ಮ್ಯಾಪ್ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಒತ್ತುವರಿ ತೆರವು ಆಗಲೇಬೇಕಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಶೇ.5 ರಷ್ಟು ಹೆಚ್ಚು ಅನುದಾನ: ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎಸ್​ಡಿಆರ್​ಎಂಎಫ್​ನಡಿ 1,054 ಕೋಟಿ ರೂ. ಮಂಜೂರು ಮಾಡಿದೆ. 2021ರಲ್ಲಿ ಎನ್​ಡಿಆರ್​ಎಫ್​ನಡಿ 994 ಕೋಟಿ ರೂ. ಅನುದಾನ ಬಂದಿದೆ. ಈ ಸಾಲಿಗೆ ಶೇ.5ರಷ್ಟು ಹೆಚ್ಚು ಮಾಡಿ 1.107 ಕೋಟಿ ರೂ.ಗಳನ್ನು ನೀಡಿದೆ.

ಆ್ಯಪ್​ ಬಳಕೆ: ಈಗಾಗಲೇ ರಚನೆ ಮಾಡಿರುವ ವರುಣ ಮಿತ್ರ ಕಾಲ್ ಸೆಂಟರ್ ಹಾಗೂ ಶಿಡ್ಲು ಆ್ಯಪ್​ ಬಳಕೆಗೆ ಸೂಚನೆ ನೀಡಲಾಗಿದೆ. ಈ ಆಪ್​ನಲ್ಲಿ ಕಾಲಕಾಲಕ್ಕೆ ಮಾಹಿತಿ ಲಭ್ಯವಾಗುತ್ತದೆ.

ಕ್ರಿಯಾ ಯೋಜನೆ ಸ್ವರೂಪ

  • ಹಿಂದಿನ ಅನುಭವದ ಆಧಾರದಲ್ಲಿ ಫ್ಲಡ್ ರಿಸ್ಕ್ ಮ್ಯಾನೇಜ್​ವೆುಂಟ್ 2021 ಪ್ರಕಾರ ಕಾರ್ಯೋನ್ಮುಖ
  • ಪ್ರತಿ ಜಿಲ್ಲೆಗೂ ಕಂಟ್ರೋಲ್ ರೂಂ
  • ಪ್ರವಾಹಕ್ಕೆ ಒಳಗಾಗುವ ಹಳ್ಳಿಗಳಿಗೆ ಮೊದಲೇ ಮಾಹಿತಿ ರವಾನೆ
  • ತಕ್ಷಣದ ಕ್ರಮಕ್ಕೆ ಎಸ್​ಎಂಎಸ್ ಮಾಹಿತಿ ವ್ಯವಸ್ಥೆ
  • ನದಿಪಾತ್ರವಾರು ಎಲ್ಲಿಗೆ ಸ್ಥಳಾಂತರ ಎಂಬ ಮಾಹಿತಿ
  • ಗ್ರಾಮವಾರು ವಾಟ್ಸ್ಯಾಪ್ ಗ್ರೂಪ್ ರಚನೆ
  • ಪ್ರತಿ ಹಳ್ಳಿಗೂ ಪ್ರತ್ಯೇಕ ಯೋಜನೆ
  • ಅಣೆಕಟ್ಟು ನಿರ್ವಹಣಾ ವ್ಯವಸ್ಥೆ
  • ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್ ತಂಡಗಳ ಸಿದ್ಧತೆ
  • ಹಾನಿ ತಡೆಗೆ ಅಗತ್ಯ ಉಪಕರಣಗಳ ಜಿಲ್ಲಾವಾರು ಸಿದ್ಧತೆ
  • ಮಾನವ ಸಂಪನ್ಮೂಲಕ್ಕೆ ತರಬೇತಿ
  • ಅಗತ್ಯ ಇರುವ ಕಡೆ ಹೆಲಿಕಾಪ್ಟರ್​ಗಳ ಬಳಕೆ
  • ಪ್ರವಾಹ ಮುಂಜಾಗ್ರತಾ ಕೋಶದಿಂದ ಮಾಹಿತಿ ರವಾನೆ
  • ವಿವಿಧ ಇಲಾಖೆಗಳ ಸೇವೆಯ ಬಳಕೆ
  • ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ವರ್ಷ ಜಾರಿ ಮಾಡಿದ್ದ ಯೋಜನೆಯಲ್ಲಿ ಸುಧಾರಣೆ
  • ಅಂತಾರಾಜ್ಯ ಸಮನ್ವಯ

ಪ್ರವಾಹ ಸಂದರ್ಭದಲ್ಲಿನ ಮುನ್ನೆಚ್ಚರಿಕೆಗಳು

  • ಪ್ರಥಮ ಚಿಕಿತ್ಸಾ ಪೆಟ್ಟಿಗೆ, ನೀರಿನ ಬಾಟಲಿ, ಟಾರ್ಚ್, ರೇಡಿಯೋ ಜತೆಯಲ್ಲಿರಲಿ
  • ಗ್ರಾಮಕ್ಕೆ ಪ್ರವಾಹ ಬಂದಾಗ ಬದಲಿ ರಸ್ತೆಗಳ ಬಗ್ಗೆ ತಿಳಿದಿರಿ
  • ಏಣಿ, ಹಗ್ಗ, ಮರಳಿನ ಚೀಲಗಳನ್ನು ಮನೆಯಲ್ಲಿ ಇಟ್ಟಿರಿ
  • ಜಾನುವಾರುಗಳನ್ನು ಕಟ್ಟಿ ಹಾಕಬೇಡಿ
  • ವಿದ್ಯುತ್ ಹಾಗೂ ಗ್ಯಾಸ್ ಸಂಪರ್ಕ ಆಫ್ ಮಾಡಿರಿ
  • ಜಿಲ್ಲಾಡಳಿತದ ಸೂಚನೆ ಇದ್ದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿ
  • ಶೌಚಗೃಹದ ಗುಂಡಿಗಳಿಗೆ ಮರಳಿನ ಚೀಲದಿಂದ ಮುಚ್ಚಿ, ಇಲ್ಲದಿದ್ದಲ್ಲಿ ನೀರು ತುಂಬಿ ಮಲೀನವಾಗುತ್ತದೆ. ಅದು ಚರ್ಮ ರೋಗಗಳಿಗೆ ಕಾರಣವಾಗುತ್ತದೆ
  • ಭೂಕುಸಿತದ ಬಗ್ಗೆ ಎಚ್ಚರಿಕೆ ಇರಲಿ
  • ವಿದ್ಯುತ್ ಮಾರ್ಗಗಳು ತುಂಡಾಗಿ ಬಿದ್ದಿರುವ ಸ್ಥಳಗಳ ಬಗ್ಗೆ ಎಚ್ಚರ
  • ರಸ್ತೆ, ವಿದ್ಯುತ್ ಮಾರ್ಗ ಹಾನಿಯಾಗಿದ್ದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ
  • ಗಾಳಿ ವೇಗವಾಗಿ ಬೀಸುತ್ತಿರುವ ಕಾರಣ ಮರಗಳ ಕೆಳಗೆ ನಿಲ್ಲಬೇಡಿ
  • ಮನೆಗಳಿಗೆ ಡಿಡಿಟಿಯಂತಹ ಸೋಂಕು ನಿವಾರಕ ಸಿಂಪಡಿಸಿ
  • ವಿಷ ಜಂತುಗಳ ಬಗ್ಗೆ ಎಚ್ಚರವಾಗಿರಿ
ಕ್ರಿಯಾ ಯೋಜನೆಯನ್ನು ರೂಪಿಸಿ ಜಿಲ್ಲಾಡಳಿತಗಳಿಗೆ ನೀಡಲಾಗಿದೆ. ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿಗಳು ಸಲಹೆ, ಸೂಚನೆ ನೀಡುತ್ತಿರುತ್ತಾರೆ. ಪ್ರವಾಹ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಣಕಾಸಿನ ಸಮಸ್ಯೆಯಿಲ್ಲ. | ಡಾ.ಮನೋಜ್ ರಾಜನ್ ಪ್ರಕೃತಿ ವಿಕೋಪ ನಿಯಂತ್ರಣ ಪ್ರಾಧಿಕಾರದ ಆಯುಕ್ತರು

ಪದೇಪದೆ ಪ್ರಕೃತಿ ವಿಕೋಪ: ರಾಜ್ಯ ಪದೇಪದೆ ನೆರೆ ಅಥವಾ ಬರಕ್ಕೆ ಒಳಗಾಗುವ ಎಂಟು ರಾಜ್ಯಗಳಲ್ಲಿ ಒಂದಾಗಿದೆ. ಮೂರು ದಶಕಗಳಲ್ಲಿ 16 ವರ್ಷ ಬರ ಕಾಡಿದ್ದರೆ, 11 ವರ್ಷ ನೆರೆ ಅಪ್ಪಳಿಸಿದೆ. 2018ರಿಂದ ಸತತವಾಗಿ ಪ್ರವಾಹಕ್ಕೆ ರಾಜ್ಯ ತುತ್ತಾಗುತ್ತಿದ್ದು, 14 ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ಕೃಷ್ಣಾ ನದಿಯ ವ್ಯಾಪ್ತಿ, ಕರಾವಳಿ, ಮಲೆನಾಡು ಹಾಗೂ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಹ ಹೆಚ್ಚಾಗಿರುತ್ತದೆ. ರಾಜ್ಯದ 912 ಗ್ರಾಪಂಗಳ 1728 ಹಳ್ಳಿಗಳು ಸದಾ ಮುಳುಗಡೆ ಭೀತಿ ಎದುರಿಸುತ್ತಿವೆ. ಆದರೆ, ಸರ್ಕಾರ ಅವುಗಳ ಶಾಶ್ವತ ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿಲ್ಲ.

ಯಾವ ಇಲಾಖೆ ಏನು ಸಿದ್ಧತೆ?

  • ಕಂದಾಯ: ಕಂಟ್ರೋಲ್ ರೂಂ ಸ್ಥಾಪನೆ, ಸಶಸ್ತ್ರ ಪಡೆಗಳ ಜತೆ ಸಂಪರ್ಕ, ಟ್ರಾಫಿಕ್ ಮ್ಯಾನೇಜ್​ವೆುಂಟ್, ಕಾಳಜಿ ಕೇಂದ್ರಗಳ ಸ್ಥಾಪನೆ, ಅಗತ್ಯ ವಸ್ತುಗಳ ದಾಸ್ತಾನು, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು.
  • ಜಲ ಸಂಪನ್ಮೂಲ: ಅಂತಾರಾಜ್ಯ ಸಹಕಾರ, ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳ ರಚನೆ, ಜಿಲ್ಲಾಮಟ್ಟದಲ್ಲಿ ನಿಯಂತ್ರಣ ಕೊಠಡಿ, ಪ್ರತಿ ಜಲಾಶಯಕ್ಕೆ ನೋಡಲ್ ಅಧಿಕಾರಿ ನೇಮಕ.
  • ಆರೋಗ್ಯ ಇಲಾಖೆ: ಔಷಧಗಳ ದಾಸ್ತಾನು, ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ, ಸಿಬ್ಬಂದಿ ನಿಯೋಜನೆ
  • ಇಂಧನ ಇಲಾಖೆ: ಸಿಬ್ಬಂದಿ ನಿಯೋಜನೆ, ತರಬೇತಿ, ತುರ್ತು ದುರಸ್ತಿಗೆ ಸಿದ್ಧತೆ, ಅಗತ್ಯ ಪರಿಕರಗಳನ್ನು ಹೊಂದಿಸಿಕೊಳ್ಳುವುದು
  • ಅರಣ್ಯ: ನರ್ಸರಿಗಳನ್ನು ಪ್ರೋತ್ಸಾಹಿಸುವುದು, ತೇವಾಂಶದ ಭೂಮಿ ಇರುವ ಕಡೆ ಅರಣ್ಯೀಕರಣ, ಒಣಗಿದ ಮರ ಕತ್ತರಿಸುವುದು
  • ಕೃಷಿ ಇಲಾಖೆ: ಬೀಜ, ರಸಗೊಬ್ಬರ ದಾಸ್ತಾನು, ಬೆಳೆ ಹಾನಿ ಅಧ್ಯಯನ, ಗೋದಾಮುಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವುದು
  • ಆಹಾರ ಇಲಾಖೆ: ಆಹಾರ ಧಾನ್ಯಗಳ ದಾಸ್ತಾನು, ಕಾಳಸಂತೆಗೆ ತಡೆ, ತುರ್ತು ಸಂದರ್ಭಕ್ಕೆ ಬೇಕಾದ ಇಂಧನ ದಾಸ್ತಾನು
  • ಪಶು ಸಂಗೋಪನೆ: ಅಗತ್ಯ ಮೇವು ಹಾಗೂ ಔಷಧ ದಾಸ್ತಾನು
  • ಲೋಕೋಪಯೋಗಿ: ತುರ್ತು ರಸ್ತೆಗಳ ದುರಸ್ತಿ, ಹೆಲಿಪ್ಯಾಡ್​ಗಳನ್ನು ಸಿದ್ಧವಿಡುವುದು, ಪರ್ಯಾಯ ರಸ್ತೆಗಳ ಅಭಿವೃದ್ಧಿ, ಸೇತುವೆಗಳ ದುರಸ್ತಿ
  • ಅಗ್ನಿಶಾಮಕ: ಬೋಟ್, ಸಿಬ್ಬಂದಿ ವ್ಯವಸ್ಥೆ
  • ಮೀನುಗಾರಿಕೆ: ಮೀನುಗಾರರಲ್ಲಿ ಜಾಗೃತಿ ಮೂಡಿಸುವುದು
  • ವಾರ್ತಾ ಇಲಾಖೆ: ವದಂತಿಗಳನ್ನು ನಂಬದಂತೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ
  • ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೂ ನಿರ್ದಿಷ್ಟ ಜವಾಬ್ದಾರಿಗಳ ಹಂಚಿಕೆ ಮಾಡಲಾಗಿದೆ.