ನ್ಯೂಸ್

ಮನಸ್ಥಿತಿ ಬದಲಾದರೆ ರಾಮರಾಜ್ಯ!; ಅಪರಾಧ, ವ್ಯಾಜ್ಯಗಳ ಏರಿಕೆಗೆ ಜನಸಾಮಾನ್ಯನೂ ಪಾಲುದಾರ

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಜತೆಗೆ ಅವರ ಹಕ್ಕುಗಳ ಬಗ್ಗೆ ಜಾಗೃತರಾಗಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ.9ರಂದು ‘ರಾಷ್ಟ್ರೀಯ ಕಾನೂನು ಸೇವೆಗಳ ದಿನ’ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆಗಿರುವ, ಕರ್ನಾಟಕ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರು ‘ವಿಜಯವಾಣಿ’ ಸಂವಾದದಲ್ಲಿ ಪಾಲ್ಗೊಂಡು ಕಾನೂನು ಸೇವೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ.

ಕಾನೂನಿನ ಅರಿವು ಅಗತ್ಯ

ಸಮಾಜದಲ್ಲಿ ಅಪರಾಧ, ವ್ಯಾಜ್ಯ ಹೆಚ್ಚುತ್ತಿವೆ ಎಂದರೆ ಅದರಲ್ಲಿ ಪ್ರತಿಯೊಬ್ಬ ನಾಗರಿಕನೂ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರನಾಗಿರುತ್ತಾನೆ. ನ್ಯಾಯಾಲಯಗಳು ಅಥವಾ ಲೋಕ ಅದಾಲತ್ ಮೂಲಕ ಸಮಾಜವನ್ನು ಸಂಪೂರ್ಣ ಅಪರಾಧ ಅಥವಾ ವ್ಯಾಜ್ಯಮುಕ್ತ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಕಾನೂನಿನ ಬಗ್ಗೆ ಅರಿವು ಮೂಡಿಸುವ ಮೂಲಕ ಹಾಗೂ ಕೋರ್ಟ್ ಕೇಸ್​ಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಮೂಲಕ ಅಪರಾಧಗಳು, ವ್ಯಾಜ್ಯಗಳ ಪ್ರಮಾಣ ತಗ್ಗಿಸಬಹುದು. ಅಂತಿಮವಾಗಿ ಜನರ ಮನಸ್ಥಿತಿ ಬದಲಾಗಬೇಕು. ಪ್ರತಿಯೊಬ್ಬರ ಮನಸ್ಸೂ ರಾಮರಾಜ್ಯದಂತಾದರೆ ಮಾತ್ರ ದೇಶವೂ ರಾಮರಾಜ್ಯವಾಗುತ್ತದೆ ಎನ್ನುತ್ತಾರೆ ನ್ಯಾಯಮೂರ್ತಿ ಬಿ. ವೀರಪ್ಪ.

ತ್ವರಿತ ನ್ಯಾಯಕ್ಕೆ ಲೋಕ ಅದಾಲತ್

ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಿವೆ. ಕೋರ್ಟ್​ಗಳ ಸಂಖ್ಯೆ ಕಡಿಮೆ ಇವೆ. ಹೀಗಿರುವಾಗ ಪ್ರತಿ ಪ್ರಕರಣವನ್ನೂ ಸಾಕ್ಷ್ಯಾಧಾರ ಆಧಾರದಲ್ಲಿ ವಿಚಾರಣೆ ನಡೆಸುತ್ತಾ ಹೋದಾಗ ಸಹಜವಾಗಿಯೇ ನ್ಯಾಯದಾನ ವಿಳಂಬವಾಗುತ್ತದೆ. ನ್ಯಾಯಾಲಯಗಳ ಮೇಲಿನ ಒತ್ತಡ ತಗ್ಗಿಸುವ ಸಲುವಾಗಿಯೇ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಲೋಕ ಅದಾಲತ್​ನಲ್ಲಿ ಎರಡೂ ಪಕ್ಷಗಳ ಕಡೆಯವರೂ ರಾಜೀ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳುವುದರಿಂದ ಕೋರ್ಟ್​ಗಳ ಹೊರೆ ತಗ್ಗುವ ಜತೆಗೆ ಜನರ ಹಣ ಹಾಗೂ ಸಮಯವೂ ಉಳಿಯುತ್ತದೆ.

ಅದಾಲತ್ ಡಿಕ್ರಿಯೇ ಅಂತಿಮ

ನ್ಯಾಯಾಲಯಗಳಲ್ಲಿ ಕೇಸ್ ನಡೆದರೆ ಸುಪ್ರೀಂಕೋರ್ಟ್​ವರೆಗೂ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ, ಅದಾಲತ್​ನಲ್ಲಿ ಒಮ್ಮೆ ಉಭಯ ಪಕ್ಷಗಾರರ ಸಮ್ಮುಖದಲ್ಲಿ ಪ್ರಕರಣ ರಾಜೀಯಾದರೆ ಅದೇ ಅಂತಿಮ. ಅದನ್ನು ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶವಿರುವುದಿಲ್ಲ. ಇದರಿಂದ, ಮೇಲಿಂದ ಮೇಲೆ ನ್ಯಾಯಾಲಯಗಳಿಗೆ ಅಲೆಯುವ ಕಷ್ಟವೂ ತಪು್ಪತ್ತದೆ. ಜತೆಗೆ, ಲೋಕ ಅದಾಲತ್​ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ಕೋರ್ಟ್ ಶುಲ್ಕ ಮರುಪಾವತಿಯಾಗುತ್ತದೆ. ಈ ಎಲ್ಲ ಅನುಕೂಲಗಳನ್ನೂ ಮನಸಲ್ಲಿಟ್ಟುಕೊಂಡು ಲೋಕ ಅದಾಲತ್ ವ್ಯವಸ್ಥೆಯನ್ನು ಜನ ಹೆಚ್ಚು ಬಳಸಿಕೊಳ್ಳಬೇಕು.

ಯಾರ್ಯಾರಿಗೆ ಉಚಿತ ಕಾನೂನು ನೆರವು?

  • ಮಹಿಳೆಯರು ಮತ್ತು ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಂಗವಿಕಲರು, ಕಾರ್ವಿುಕ ವರ್ಗ, ಮಾನವ ಕಳ್ಳಸಾಗಣೆಗೆ ಒಳಗಾದವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಒಳಗಾದವರು, ಕಸ್ಟಡಿಯಲ್ಲಿರುವ ಆರೋಪಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರು
  • ವಾರ್ಷಿಕ 3 ಲಕ್ಷಕ್ಕೂ ಕಡಿಮೆ ಆದಾಯ ಇರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಪ್ರಾಧಿಕಾರದ ವತಿಯಿಂದಲೇ ವಕೀಲರನ್ನೂ ನೇಮಿಸಲಾಗುತ್ತದೆ.

149 ಕಾಲೇಜುಗಳಲ್ಲಿ ಲೀಗಲ್ ಕ್ಲಿನಿಕ್ ಆರಂಭ

149 ಕಾಲೇಜುಗಳಲ್ಲಿ ಲೀಗಲ್ ಸರ್ವೀಸ್ ಕ್ಲಿನಿಕ್ ಆರಂಭಿಸಲಾಗಿದ್ದು, ಅವುಗಳ ಸದಸ್ಯರಾಗಿರುವ ವಿದ್ಯಾರ್ಥಿಗಳು ಜನರಿಗೆ ಕಾನೂನು ಅರಿವು ಮೂಡಿಸುತ್ತಿದ್ದಾರೆ. ನಮ್ಮ ಉದ್ದೇಶ ಗ್ರಾಮೀಣ ಭಾಗಗಳ ಕಟ್ಟಕಡೆಯ ವ್ಯಕ್ತಿಗೂ ಕಾನೂನು ತಲುಪಿಸಬೇಕು. ಇದಕ್ಕಾಗಿ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯದಲ್ಲಿ ಕಾನೂನು ಸೇವೆಗಳ ಸಮಿತಿ ರಚಿಸಲಾಗಿದೆ. ಅಲ್ಲಿ ಹೋಗಿ ಕಾನೂನು ಸಲಹೆ ಪಡೆಯಬಹುದು. ಕಾಯ್ದೆ ಅನುಸಾರ ಅರ್ಹತೆ ಇದ್ದರೆ ಉಚಿತ ಕಾನೂನು ನೆರವೂ ದೊರೆಯಲಿದೆ ಎನ್ನುತ್ತಾರೆ ನ್ಯಾಯಮೂರ್ತಿ ಬಿ. ವೀರಪ್ಪ.

ಪೋಕ್ಸೋ ತಿದ್ದುಪಡಿ ಅಗತ್ಯ

ಇತ್ತೀಚಿಗೆ ಕೌಟುಂಬಿಕ ಕಲಹಗಳು, ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಒಟ್ಟಿಗೆ ಬಾಳಲಾಗದೆ ದೂರವಾಗುವ ಪಾಲಕರು ಮಕ್ಕಳ ಸುಪರ್ದಿಗಾಗಿ ಕಿತ್ತಾಡುತ್ತಾರೆ. ನಾಲ್ಕೈದು ವರ್ಷದ ಮಕ್ಕಳ ಕಸ್ಟಡಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಸಣ್ಣ ವಯಸ್ಸಿನಲ್ಲೇ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸುತ್ತಾರೆ. ಇವೆಲ್ಲ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆ ಮಕ್ಕಳನ್ನು ಕರೆದು ಯಾರ ಬಳಿ ಇರುತ್ತೀರಿ ಎಂದು ನಾವು ಕೇಳಿದರೆ, ಅಪ್ಪ-ಅಮ್ಮ ಇಬ್ಬರೂ ಬೇಕು ಎನ್ನುತ್ತಾರೆ. ಆದರೆ, ಪಾಲಕರು ಮಾತ್ರ ಮಕ್ಕಳ ಭಾವನೆಗಳಿಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ. ಮಕ್ಕಳ ಭವಿಷ್ಯವನ್ನೂ ಲೆಕ್ಕಿಸದೆ ವೈಯಕ್ತಿಕ ಹಠ ಸಾಧನೆಗಾಗಿ ಎಳೆಯ ಮನಸ್ಸುಗಳಿಗೆ ಕಿರುಕುಳ ನೀಡುತ್ತಾರೆ. ಈ ರೀತಿ ದೌರ್ಜನ್ಯಗಳನ್ನು ತಪ್ಪಿಸಲು ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ರೀತಿಯ ಪ್ರಕರಣಗಳಲ್ಲಿ ಮೊದಲು ಪಾಲಕರ ವಿರುದ್ಧವೇ ಕೇಸ್ ದಾಖಲಿಸಬೇಕು. ಇಂತಹ ಪ್ರಕರಣಗಲ್ಲಿ ಕೋರ್ಟ್​ಗೆ ಬರುತ್ತಿರುವವರಲ್ಲಿ ವಿದ್ಯಾವಂತರೇ ಹೆಚ್ಚಾಗಿದ್ದಾರೆ ಎನ್ನುವುದು ವಿಷಾದದ ಸಂಗತಿ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಬೇಸರ ವ್ಯಕ್ತಪಡಿಸಿದರು.

ಅದಾಲತ್​ಗೆ ಪ್ರಕರಣಗಳಾವು?

ವ್ಯಾಜ್ಯಪೂರ್ವ ಪ್ರಕರಣ: ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ ಮರುಸ್ಥಾಪನೆ, ರಾಜೀಯಾಗಬಲ್ಲ ಅಪರಾಧ ಪ್ರಕರಣಗಳು, ಸಿವಿಲ್ ಮತ್ತು ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು.

ಕೋರ್ಟಲ್ಲಿ ಬಾಕಿ ಇರುವ ಪ್ರಕರಣ: ರಾಜೀಯಾಗಬಲ್ಲ ಅಪರಾಧ ಪ್ರಕರಣಗಳು, ಚೆಕ್ ಬೌನ್ಸ್ ಕೇಸ್, ಬ್ಯಾಂಕ್ ಪ್ರಕರಣ, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣ, ಭೂಸ್ವಾಧೀನ ಪ್ರಕರಣ, ವೇತನ, ಭತ್ಯೆ, ಪಿಂಚಣಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಜಿಲ್ಲಾ ಹಾಗೂ ಹೈಕೋರ್ಟ್​ಗಳಲ್ಲಿ ಬಾಕಿ ಇರುವ ಕಂದಾಯ ಪ್ರಕರಣಗಳು, ಸಿವಿಲ್ ಪ್ರಕರಣ, ಪಾಲು ವ್ಯಾಜ್ಯ, ವಾಣಿಜ್ಯ ವ್ಯಾಜ್ಯ ಇತರ ಪ್ರಕರಣಗಳು.

ಕ್ಷುಲ್ಲಕ ಕೇಸ್​ಗಳಿಗೆ ಕಡಿವಾಣ

ಎಷ್ಟೋ ಮಂದಿ ಸಣ್ಣಪುಟ್ಟ ವಿಷಯಗಳಿಗೆ, ಸ್ವಾರ್ಥ ಸಾಧನೆಗೆ ಅಥವಾ ಮತ್ತೊಬ್ಬರ ಮೇಲಿನ ದ್ವೇಷದಿಂದ ಕೋರ್ಟ್​ಗೆ ಕೇಸ್ ಹಾಕಿಕೊಂಡು ಬರುತ್ತಾರೆ. ಇಂತಹ ಅರ್ಜಿಗಳಿಂದ ನ್ಯಾಯಾಲಯದ ಅಮೂಲ್ಯ ಸಮಯದ ಜತೆಗೆ ಸಾರ್ವಜನಿಕರ ಹಣವೂ ವ್ಯರ್ಥವಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಕೇಸ್ ಬಂದಾಗ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ, ಅದನ್ನು ಹಿಂಪಡೆಯುವಂತೆ ಅರ್ಜಿದಾರರಿಗೆ ಸೂಚಿಸಲಾಗುತ್ತದೆ. ಆದರೂ, ಕೆಲವರು ವಾದ ಮಂಡಿಸುವುದಾಗಿ ತಿಳಿಸಿ, ಪ್ರಕರಣದಲ್ಲಿ ಮುಂದುವರಿಯುತ್ತಾರೆ. ಅಂತಿಮವಾಗಿ ಅವರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವರಿಂದ ಸಾಧ್ಯವಾಗದಿದ್ದಾಗ ಅವರಿಗೆ ದಂಡ ವಿಧಿಸದೆ ಬೇರೆ ದಾರಿ ಇರುವುದಿಲ್ಲ.

23 ಲಕ್ಷ ಕೇಸ್ ವಿಲೇವಾರಿ

ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ 2021ರ ಡಿಸೆಂಬರ್​ನಿಂದ 2022ರ ಆಗಸ್ಟ್​ವರೆಗೆ ಒಟ್ಟು ನಾಲ್ಕು ರಾಷ್ಟ್ರೀಯ ಲೋಕ ಅದಾಲತ್​ಗಳನ್ನು ನಡೆಸಲಾಗಿದ್ದು, ಒಟ್ಟು 23,05,002 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಸಾರ್ವಜನಿಕರಿಗೆ 3,704 ಕೋಟಿ ರೂ. ಪರಿಹಾರ ಕೊಡಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 252 ಕೋಟಿ ರೂ. ಗಳನ್ನು ಜಮಾ ಮಾಡಲಾಗಿದೆ.

ನ್ಯಾಯಾಂಗ ನಿಂದನೆಗೆ ದಂಡ ಹಾಕಬೇಕು

ಸರ್ಕಾರದ ಯಾವುದೋ ಒಂದು ಇಲಾಖೆ ವಿರುದ್ಧ ಅರ್ಜಿ ಸಲ್ಲಿಸಲಾಗಿರುತ್ತದೆ. ನಿರ್ದಿಷ್ಟ ಕಾಲಮಿತಿಯೊಳಗೆ ಅರ್ಜಿದಾರರ ಕೆಲಸ ಮಾಡಿಕೊಡುವಂತೆ ಕೋರ್ಟ್ ಆದೇಶಿಸಿರುತ್ತದೆ. ಆದರೆ, ಸಂಬಂಧಪಟ್ಟ ಅಧಿಕಾರಿ ಆದೇಶ ಪಾಲನೆ ಮಾಡಿರುವುದಿಲ್ಲ. ಆಗ ಜನ ಮತ್ತೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮೊದಲು ಅಧಿಕಾರಿಯಿಂದ ಕೆಲಸ ಮಾಡಿಸಬೇಕು. ಆ ಬಳಿಕ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡುವ ಮುನ್ನ ಸಾರ್ವಜನಿಕರು ಪದೇಪದೆ ಕೋರ್ಟ್ ಕದ ತಟ್ಟುವಂತೆ ಮಾಡಿದ್ದ ಅಧಿಕಾರಿಗೆ ದಂಡ ವಿಧಿಸಬೇಕು. ಆಗ ಅವರಿಗೆ ಕೋರ್ಟ್ ಎಂದರೇನೆಂದು ಅರ್ಥವಾಗುತ್ತದೆ. ಈಗಾಗಲೆ ಇಂಥ ಹಲವು ಪ್ರಕರಣಗಳಲ್ಲಿ ನಾನು ದಂಡವನ್ನೂ ವಿಧಿಸಿದ್ದೇನೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಸಹಾಯವಾಣಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ಸಲಹೆ ನೀಡುವ ಸಲುವಾಗಿ ಸಹಾಯವಾಣಿ ಸೇವೆ ಲಭ್ಯವಿದ್ದು, ದಿನದ 24 ಗಂಟೆ ಈ ಸೌಲಭ್ಯವಿರಲಿದೆ. ಕಾನೂನು ಸಲಹೆ ಬಯಸುವ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1800-425-90900ಗೆ ಕರೆ ಮಾಡಬಹುದು.