ಬೆಂಗಳೂರು: ಕಳೆದ ಕೆಲವು ದಿನಗಳಿಂದ ಆಡಳಿತ ಬಿಜೆಪಿಗೆ ‘ರೌಡಿ ರಾಜಕೀಯ’ ಬೆನ್ನತ್ತಿದ್ದು, ಮತ್ತೊಬ್ಬ ಸಚಿವರ ಮನೆಯ ಹತ್ತಿರ ರೌಡಿ ಹಿನ್ನೆಲೆಯ ವ್ಯಕ್ತಿ ಭೇಟಿ ನೀಡಿದ್ದಾರೆ ಎಂಬ ವಿವಾದ ತಲೆಎತ್ತಿದೆ.
‘ರೌಡಿ ರಾಜಕೀಯ’ ವಿಚಾರವಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕೆಸರೆರಚಾಟ ಮುಂದುವರಿದಿದೆ. ರೌಡಿಶೀಟರ್ ಸೈಲೆಂಟ್ ಸುನಿಲ್ಕುಮಾರ್ ಜತೆಗೆ ಕಾರ್ಯಕ್ರಮವೊಂದರಲ್ಲಿ ಸಂಸದ-ಶಾಸಕರು ವೇದಿಕೆ ಹಂಚಿಕೊಂಡದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಅಪರಾಧ ಹಿನ್ನೆಲೆ ಉಳ್ಳವರಿಗೆ ಪಕ್ಷ ಪ್ರವೇಶಕ್ಕೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಸೈಲೆಂಟ್ ಸುನಿಲ್ರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯ ಸಮಿತಿ ಸ್ಪಷ್ಟಪಡಿಸಿ, ಚರ್ಚೆಗೆ ತೆರೆಎಳೆಯಲು ಪ್ರಯತ್ನಿಸಿದೆ.
ಆದರೂ ಸಚಿವರೊಬ್ಬರ ಜತೆಗೆ ರೌಡಿಶೀಟರ್ ಬೆತ್ತನಗೆರೆ ಶಂಕರ್ ಕಾಣಿಸಿಕೊಂಡದ್ದು ವಿಷಯವನ್ನು ಮತ್ತೆ ಚರ್ಚೆ ಮುನ್ನೆಲೆಗೆ ತಂದಿದೆ. ಇದು, ತಣ್ಣಗಾಗುವಷ್ಟರಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ಗಾರ್ಡನ್ ಭೇಟಿಯಾದರು ಎಂಬ ವಿವಾದ ಹುಟ್ಟಿಕೊಂಡಿದೆ.
ಕಾಂಗ್ರೆಸ್ ಅಣಕ: ಸೈಲೆಂಟ್ ಸುನಿಲ್ ಘಟನೆ ಮುಂದಿಟ್ಟುಕೊಂಡು ಬಿಜೆಪಿ ಮೇಲೆ ಕಾಂಗ್ರೆಸ್ ಮುಗಿಬಿದ್ದಿದ್ದು, ಸಾಮಾಜಿಕ ತಾಣದಲ್ಲಿ ಅಣಕಿಸುವ ಸಂದೇಶ ಹಂಚಿಕೆ ಸರಣಿ ನಿಲ್ಲಿಸಿಲ್ಲ. ಈ ಮಧ್ಯೆ ರೌಡಿಶೀಟರ್, 20 ಕೇಸ್ಗಳು ಇತ್ಯಾದಿಗಳಿದ್ದರೆ ಬಿಜೆಪಿ ಸೇರ್ಪಡೆಗೆ ಅರ್ಹವೆಂದು ಅಣಕಿಸುವ ಮತ್ತೊಂದು ಸಂದೇಶ ಹರಿಬಿಟ್ಟಿದೆ. ಕೆಪಿಸಿಸಿ ಅಧ್ಯಕ್ಷ, ಯುವ ಕಾಂಗ್ರೆಸ್ ಅಧ್ಯಕ್ಷರ ಹಿನ್ನೆಲೆ ಕೆದಕುತ್ತಾ ರೌಡಿಗಳ ದೊಡ್ಡ ದಂಡು ಇದೆ ಎಂದು ಬಿಜೆಪಿ ತಿರುಗೇಟಿನ ಸಂದೇಶಗಳನ್ನು ಹಂಚಿಕೊಳ್ಳುತ್ತಿದೆ.
ಐದು ದಶಕಗಳ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ ಅದರಲ್ಲಿ ನಾಗ ಯಾರು, ತಿಮ್ಮ ಯಾರು ಗೊತ್ತಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಯಾರ್ಯಾರೋ ಓಡಾಡುತ್ತಾರೆ. ಅದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ.
| ವಿ.ಸೋಮಣ್ಣ ವಸತಿ ಸಚಿವ
ರೌಡಿಗಳ ಬಗ್ಗೆ ನಿಮಗೆ (ಮಾಧ್ಯಮದವರು) ಹೆಚ್ಚು ಆಸಕ್ತಿಯಿದ್ದಂತಿದೆ. ಪಕ್ಷದಲ್ಲಿ ಯಾವುದೇ ರೌಡಿಗಳನ್ನು ಸೇರಿಸುವುದಿಲ್ಲ, ಅವಕಾಶಗಳನ್ನು ಕೊಡುವುದಿಲ್ಲ. ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ, ಆ ಬಗ್ಗೆ ಹೆಚ್ಚು ರ್ಚಚಿಸಲು ಇಷ್ಟಪಡುವುದಿಲ್ಲ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಕಾಂಗ್ರೆಸ್ ಗೂಂಡಾಗಳ, ರೌಡಿಗಳ ಪಕ್ಷ. ಆ ಪಕ್ಷದ ಅಧ್ಯಕ್ಷರ ಹಿನ್ನೆಲೆ ನೋಡಿದರೆ ಸಾಕು, ಎಲ್ಲ ಗೊತ್ತಾಗುತ್ತದೆ. ಜನಪರ ಕೆಲಸ ಮಾಡುತ್ತಿರುವ ಬಿಜೆಪಿಗೆ ರೌಡಿಗಳ ಅಗತ್ಯವಿಲ್ಲ. ಜನಪ್ರತಿನಿಧಿಗಳಿಗೆ ಹಲವರ ಭೇಟಿ ಸಹಜ, ಭೇಟಿಗೆ ಬರುವವರನ್ನು ಬರಬೇಡಿ ಎಂದು ಹೇಳಲಾಗದು.
| ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವ