ಕೊಚ್ಚಿ: ಕಟು ಟೀಕೆಗಳನ್ನು ಎದುರಿಸಿದ ಕೇರಳ ಪೊಲೀಸ್ ಕಾಯ್ದೆ ತಿದ್ದುಪಡಿಯನ್ನು ಕೇರಳ ಸರ್ಕಾರ ಸೋಮವಾರ ಹಿಂತೆಗೆದುಕೊಂಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ಎಲ್ಡಿಎಫ್ ಬೆಂಬಲಿಗರು ವ್ಯಕ್ತಪಡಿಸಿದ ಕಾಳಜಿಯನ್ನು ಪರಿಗಣಿಸಿದ ಸರ್ಕಾರ, ಕಾಯ್ದೆ ತಿದ್ದುಪಡಿ ಕ್ರಮವನ್ನು ಹಿಂಪಡೆದಿದೆ ಎಂದು ಸಿಎಂ ವಿಜಯನ್ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ಪ್ರಕಟಿಸಿದಾಗ ವಿವಿಧ ರೀತಿಯ ಪ್ರತಿಕ್ರಿಯೆಗಳು ಲಭ್ಯವಾಗಿವೆ. ವಿವಿಧ ದೃಷ್ಟಿಕೋನಗಳ ನಿಲುವು ಕಂಡುಬಂದಿದೆ. ಎಲ್ಡಿಎಫ್ ಬೆಂಬಲಿಗರು ತೋರಿಸಿದ ಕಾಳಜಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತವರ ನಿಲುವನ್ನು ಸರ್ಕಾರ ಗೌರವಿಸುತ್ತದೆ. ಈ ಪರಿಸ್ಥಿತಿಯಲ್ಲಿ ಕಾಯ್ದೆ ತಿದ್ದುಪಡಿ ಸರಿ ಅಲ್ಲ ಎಂಬುದು ಸರ್ಕಾರಕ್ಕೂ ಮನವರಿಕೆಯಾಗಿದೆ ಎಂದು ಸಿಎಂ ವಿಜಯನ್ ತಿಳಿಸಿದ್ದಾರೆ.
ಈ ಕುರಿತು ವಿಧಾನಸಭೆಯಲ್ಲಿ ವಿಸ್ತೃತವಾದ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಎಲ್ಲ ಪಕ್ಷಗಳ ದೃಷ್ಟಿಕೋನಗಳು, ಅಭಿಪ್ರಾಯಗಳನ್ನೂ ಸ್ವೀಕರಿಸಿ ಸರ್ಕಾರ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು. (ಏಜೆನ್ಸೀಸ್)