ನವದೆಹಲಿ: ಕರೊನಾ ವೈರಸ್ ದೇಶದಲ್ಲಿ ಯಮರೂಪಿಯಾಗಿ ಕಾಡಲಾರಂಭಿಸಿದೆ. ವೈರಸ್ ಬಗ್ಗೆ ಅನೇಕರು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುತ್ತಿದ್ದು, ಮಾಹಿತಿ ನೀಡುತ್ತಿದ್ದರೆ ಇನ್ನು ಕೆಲವರು ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡಿ ಜನರಲ್ಲಿ ಭಯವನ್ನು ಹೆಚ್ಚಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಸಿದ್ಧ ವೈದ್ಯಕೀಯ ಸಂಸ್ಥೆಯಾಗಿರುವ ಎಐಐಎಮ್ಎಸ್ ಕರೊನಾ ವೈರಸ್ ಕುರಿತಾಗಿ ಕೆಲ ಮಾಹಿತಿಯನ್ನು ನೀಡಿದೆ.
ಮಾಂಸ ತಿನ್ನುವುದರಿಂದ ಕರೊನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದೇ ಕಾರಣದಿಂದಾಗಿ ಅನೇಕರು ತಾವು ಸಾಕಿದ್ದ ಕೊಳಿಗಳನ್ನು ಸಾಯಿಸಿ ಕರೊನಾ ತಡೆಗಟ್ಟುತ್ತಿದ್ದೇನೆ ಎನ್ನುವ ಧನ್ಯ ಭಾವದಲ್ಲಿದ್ದರು. ಆದರೆ ಮಾಂಸ ಸೇವನೆಯಿಂದ ಕರೊನಾ ಬರುವುದಿಲ್ಲ ಎಂದು ಎಐಐಎಮ್ಎಸ್ನ ನಿರ್ದೇಶಕರಾಗಿರುವ ಡಾ.ರಣದೀಪ್ ಗಲೇರಿಯಾ ತಿಳಿಸಿದ್ದಾರೆ. ಯಾವುದೇ ಮಾಂಸವನ್ನಾದರೂ ಬೇಯಿಸಿದ ನಂತರ ಅದರಲ್ಲಿ ವೈರಸ್ ಉಳಿದುಕೊಳ್ಳುವುದಿಲ್ಲ. ಹಾಗಾಗಿ ಅದರಿಂದ ವೈರಸ್ ಹರಡುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ತಾಪಮಾನ ಹೆಚ್ಚಿರುವ ದೇಶಗಳಲ್ಲಿ ಕರೊನಾ ವೈರಸ್ ಹೆಚ್ಚು ಪರಿಣಾಮ ಬೀರುವುದಿಲ್ಲ. ಯುರೋಪಿಯನ್ ದೇಶಗಳಲ್ಲಿ ತಾಪಮಾನ ಕಡಿಮೆ ಇರುವುದರಿಂದ ಅಲ್ಲಿ ಹೆಚ್ಚಿನ ಪರಿಣಾಮ ಕಾಣಿಸುತ್ತಿದೆ. ಸಿಂಗಾಪುರದಲ್ಲಿ ತಾಪಮಾನ ಹೆಚ್ಚಿರುವುದರಿಂದ ಅಲ್ಲಿನ ಕಡಿಮೆ ಪರಿಣಾಮವನ್ನು ನೀವು ಗಮನಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮದ್ಯಪಾನದಿಂದ ಕರೊನಾ ತಡೆಯಬಹುದು ಎನ್ನುವುದು ಸುಳ್ಳು. ಹಾಗೆಯೇ ಲವಂಗ ತಿನ್ನುವುದರಿಂದ ಕರೊನಾ ತಡೆಗಟ್ಟಬಹುದು ಎನ್ನುವುದೂ ಸಹ ಒಂದು ಸುಳ್ಳು ಸುದ್ದಿ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)