Temple Collapse 
ನ್ಯೂಸ್

Temple Collapse: ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು 5 ಮಂದಿ ಸಾವು ಶಂಕೆ, 40 ಭಕ್ತರು ಸಿಲುಕಿರುವ ಆತಂಕ!

ಮುಂಬೈ: ಮಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿ ಶನಿವಾರ ಭಾರೀ ದುರಂತ(Temple Collapse) ಸಂಭವಿಸಿದ್ದು, ದೇವಾಲಯದ ನಿರ್ಮಾಣ ಹಂತದ ಸಭಾ ಮಂಟಪದ ಮೇಲ್ಛಾವಣಿ ಕುಸಿದು ಕನಿಷ್ಠ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅವಶೇಷಗಳಡಿ 30 ರಿಂದ 40 ಭಕ್ತರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಯಶವಾಡಿ ಮಾರುತಿ ದೇವಾಲಯದಲ್ಲಿ ಘಟನೆ

ಪರಭಣಿ ಜಿಲ್ಲೆಯ ಮನ್ವತ್ ತಾಲ್ಲೂಕಿನ ಪ್ರಸಿದ್ಧ ಯಶವಾಡಿ ಮಾರುತಿ ದೇವಾಲಯದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಮೇಲ್ಛಾವಣಿ ಶನಿವಾರ ಏಕಾಏಕಿ ಕುಸಿದಿದೆ. ಘಟನೆ ಸಂಭವಿಸಿದ ವೇಳೆ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಭಕ್ತರಲ್ಲಿ ಆತಂಕ, ಹಲವರಿಗೆ ಗಾಯ

ಶನಿವಾರವಾಗಿದ್ದರಿಂದ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಈ ವೇಳೆ ಮೇಲ್ಛಾವಣಿ ಕುಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಹಲವರು ಅವಶೇಷಗಳಡಿ ಸಿಲುಕಿದ್ದು, ಅನೇಕ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರಿಕೆ

ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿರುವವರನ್ನು ಹೊರತೆಗೆದಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಜಿಲ್ಲಾಡಳಿತ ನಿರಂತರವಾಗಿ ಗಮನಿಸುತ್ತಿದೆ.

ಅಧಿಕೃತ ಮಾಹಿತಿ ಇಲ್ಲ

ಪ್ರಾಥಮಿಕ ವರದಿಗಳ ಪ್ರಕಾರ ಐವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದರೂ, ಸಾವಿನ ಸಂಖ್ಯೆ ಹಾಗೂ ಗಾಯಾಳುಗಳ ಬಗ್ಗೆ ಜಿಲ್ಲಾಡಳಿತ ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ರಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕ ನಿಖರ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ,(ಏಜೆನ್ಸೀಸ್​​).