ಬೆಂಗಳೂರು: ಸೀರೆ ವ್ಯಾಪಾರಿಯ ಬಳಿ ಹಣ ಕಂಡು ಹವಾಲಾ ಕೇಸ್ ದಾಖಲಿಸುವುದಾಗಿ ಬೆದರಿಸಿ 2 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಕಾನ್‌ಸ್ಟೆಬಲ್‌ನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಹಲಸೂರು ಗೇಟ್ ಠಾಣೆ ಕಾನ್‌ಸ್ಟೆಬಲ್ ಆನಂದ್ ಬಂಧಿತ. ಯಾದಗಿರಿ ಜಿಲ್ಲೆಯ ಆನಂದ್, 3 ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರೊಬೇಷನರಿ ಅವಧಿ ಮುಗಿದ ಬಳಿಕ ಹಲಸೂರು ಗೇಟ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ನಗರ್ತ್‌ಪೇಟೆ ನಿವಾಸಿ ರಾಜು ರಾಮ್(27), ಕಬ್ಬನ್ ಪೇಟೆಯ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸಗಟು ದರದಲ್ಲಿ ಸಣ್ಣ ವ್ಯಾಪಾರಿಗಳಿಗೆ ಸೀರೆ ಮಾರಾಟ ಮಾಡುತ್ತಿದ್ದರು. ಗ್ರಾಹಕರಿಂದ ಹಣ ಸಂಗ್ರಹಿಸುವ ಕೆಲಸವನ್ನು ರಾಜುಗೆ ಮಾಲೀಕರು ವಹಿಸಿದ್ದರು.
ಡಿ.7ರ ಸಂಜೆ 5 ಗಂಟೆಯಲ್ಲಿ ರಾಜು, 10 ಲಕ್ಷ ರೂ.ಸಂಗ್ರಹಿಸಿ ಮಾಲೀಕರ ಮನೆಗೆ ತೆರಳುತ್ತಿದ್ದರು. ಸುಣ್ಣಕಲ್ ಪೇಟೆಯ ಚಿಕ್ಕ ಅಣ್ಣಮ್ಮ ಸ್ಟ್ರೀಟ್‌ನಲ್ಲಿ ಅಡ್ಡಗಟ್ಟಿದ್ದ ಕಾನ್‌ಸ್ಟೆಬಲ್ ಆನಂದ್, ಪೊಲೀಸ್ ಗುರುತಿನ ಚೀಟಿ ತೋರಿಸಿ ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
ರಾಜು ಬಳಿಯಿದ್ದ ಹಣವನ್ನು ನೋಡಿ ‘ನೀನು ಹವಾಲಾ ಹಣವನ್ನು ಸಾಗಿಸುತ್ತಿರುವ ಮಾಹಿತಿ ಇದೆ. ನಿನ್ನನ್ನು ಈಗಲೇ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಕೇಸ್ ಬೇಡ ಅಂದರೆ 2 ಲಕ್ಷ ರೂ. ಜಮೆ ಮಾಡುವಂತೆ ಸೂಚಿಸಿದ್ದಾನೆ. ಭಯದಿಂದ ರಾಜು, ಒಪ್ಪಿದಾಗ ಕಾನ್‌ಸ್ಟೆಬಲ್ ತನ್ನ ಸ್ನೇಹಿತ ಮುಕೇಶ್ ಎಂಬಾತನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಹಣ 2 ಲಕ್ಷ ರೂ. ಜಮೆ ಮಾಡಿಸಿಕೊಂಡು ಅಲ್ಲಿಂದ ರಾಜುನನ್ನು ಕಳುಹಿಸಿದ್ದ. ಈ ಬಗ್ಗೆ ರಾಜು, ತನ್ನ ಮಾಲೀಕರ ಗಮನಕ್ಕೆ ತಂದಿದ್ದರು. ನೊಂದ ಸೀರೆ ವ್ಯಾಪಾರಿ, ಪೊಲೀಸರಿಗೆ ದೂರು ನೀಡಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಟೆಕ್ಕಿ ದಂಪತಿಗೆ ಬೆದರಿಸಿ ಸಂಪಿಗೆಹಳ್ಳಿ ಇಬ್ಬರು ಕಾನ್‌ಸ್ಟೆಬಲ್ ಹಣ ವಸೂಲಿಗೆ ಮಾಡಿದ್ದರೆ. ರಸ್ತೆಬದಿ ಧೂಮಪಾನ ಮಾಡುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಹೆದರಿಸಿ ಕೋರಮಂಗಲ ಕಾನ್‌ಸ್ಟೆಬಲ್ ಹಣ ಸುಲಿಗೆ ಮಾಡಿ ಅಮಾತನುಗೊಂಡಿದ್ದರು.
ಸಾರ್ವಜನಿಕರಿಗೆ ಬೆದರಿಸಿ ಹಣ ಸುಲಿಗೆಯಲ್ಲಿ ತೊಡಗಿರುವ ಪೊಲೀಸರ ಕೃತ್ಯವನ್ನು ಸಹಿಸುವುದಿಲ್ಲ. ಪೊಲೀಸರು ಬೆದರಿಸಿ ಹಣ ಸುಲಿಗೆ ಮಾಡಿದರೆ ಕೂಡಲೇ 112ಗೆ ಕರೆ ಮಾಡಿ ದೂರು ನೀಡಿ. ತಪ್ಪಿತಸ್ತರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ.
-ಸಿ.ಎಚ್.ಪ್ರತಾಪ್ ರೆಡ್ಡಿ- ನಗರ ಪೊಲೀಸ್ ಆಯುಕ್ತ