ನ್ಯೂಸ್

KP Oli | ಹಿಂಸಾಚಾರದ ಹಿಂದೆ ಇವರ ಕೈವಾಡ ಇದೆ!... ನೇಪಾಳದ ಘಟನೆ ಬಗ್ಗೆ ಕೊನೆಗೂ ಮೌನ ಮುರಿದ ಮಾಜಿ ಪ್ರಧಾನಿ ಓಲಿ

KP Oli: ನೇಪಾಳದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ಕುರಿತು ಮೌನ ಮುರಿದಿರುವ ನಿರ್ಗಮಿತ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮೃತರಾದ ಯುವ ಪ್ರತಿಭಟನಾಕಾರರ ಸಾವಿಗೆ ನಡೆದ ಪಿತೂರಿಯೇ ಕಾರಣ ಎಂದಿದ್ದಾರೆ.

ಶುಕ್ರವಾರ (ಸೆಪ್ಟೆಂಬರ್ 19) ಸಂವಿಧಾನ ದಿನದಂದು ಫೇಸ್‌ಬುಕ್ ಪೋಸ್ಟ್‌ ಹಂಚಿಕೊಂಡಿರುವ ಓಲಿ, ನಡೆದ ಹಿಂಸಾಚಾರಕ್ಕೆ ಅನೇಕ ಒಳನುಸುಳುಕೋರರು ಪ್ರಚೋದನೆ ನೀಡಿದ್ದು, ಸರ್ಕಾರ ಯಾವುದೇ ರೀತಿಯಲ್ಲೂ ಈ ವಿಷಯವಾಗಿ ಆದೇಶ ನೀಡಿರಲಿಲ್ಲ, ನಮ್ಮ ಪೊಲೀಸರ ಬಳಿ ಆ ರೀತಿಯ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಅಕ್ರಮವಾಗಿ ಒಳನುಸುಳಿದ ಪಿತೂರಿಗಾರರೇ ಹಿಂಸಾಚಾರಕ್ಕೆ ಪ್ರಮುಖ ಕಾರಣ, ಇದರ ಪರಿಣಾಮವಾಗಿ ನಮ್ಮ ಸಾಕಷ್ಟು ಯುವಕರು ತಮ್ಮ ಪ್ರಾಣ ಕಳೆದುಕೊಂಡರು. ಸರ್ಕಾರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಯಾವುದೇ ಆದೇಶ ನೀಡಿರಲಿಲ್ಲ, ಪೊಲೀಸರ ಬಳಿ ಇಲ್ಲದಿರುವ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸುವುದಾದರು ಹೇಗೆ ಎಂಬುದನ್ನು ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರವು ಈ ಪ್ರತಿಭಟನೆಯನ್ನು ನಿಭಾಯಿಸಿದ ರೀತಿ, ಯುವಜನರೇ ಹೆಚ್ಚಾಗಿ ಭಾಗವಹಿಸಿದ ಹೋರಾಟದಲ್ಲಿ ನಡೆದ ಬಲಪ್ರಯೋಗದ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಓಲಿ ಈ ಸ್ಪಷ್ಟನೆ ನೀಡಿದ್ದಾರೆ.

ಸಂವಿಧಾನ ಅಪಾಯದಲ್ಲಿದೆ...‘

ನೇಪಾಳದ ಸಂವಿಧಾನವು ಕೂಡ ದಾಳಿಗೆ ಒಳಗಾಗಿದ್ದು, ಪ್ರಸ್ತುತ ರಾಜಕೀಯ ಹಾದಿ ಇದೇ ರೀತಿ ಅನಿಯಂತ್ರಿತವಾಗಿ ಮುಂದುವರಿದರೆ ದೇಶದ ಸಾರ್ವಭೌಮತ್ವಕ್ಕೆ ಅಪಾಯ ಎಂದು ಎಚ್ಚರಿಸಿದ್ದಾರೆ. "ನಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಸಿಂಘಾ ದರ್ಬಾರ್‌ಗೆ ಬೆಂಕಿ ಹಚ್ಚಲಾಯಿತು, ನೇಪಾಳದ ನಕ್ಷೆಯನ್ನು ಸುಟ್ಟುಹಾಕಲಾಯಿತು ಮತ್ತು ರಾಷ್ಟ್ರೀಯ ಚಿಹ್ನೆಯನ್ನು ಅಳಿಸಿಹಾಕಲಾಯಿತು, ಸಾರ್ವಜನಿಕ ಕಚೇರಿಗಳು, ರಾಜಕೀಯ ಪಕ್ಷದ ಪ್ರಧಾನ ಕಚೇರಿಗಳು, ನ್ಯಾಯಾಲಯಗಳು, ಮನೆಗಳು ಮತ್ತು ಸಂಸ್ಥೆಗಳನ್ನು ನಾಶಮಾಡಲು ಸಂಘಟಿತ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಏಕತೆಗೆ ಕರೆ ನೀಡಿದ ಅವರು, ಸಂವಿಧಾನ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವನ್ನು ರಕ್ಷಿಸುವಂತೆ ನಾಗರಿಕರನ್ನು ಒತ್ತಾಯಿಸಿದರು.

ಓಲಿ ಎಲ್ಲಿದ್ದಾರೆ..?

ಮೊದ ಮೊದಲು ಶಾಂತಿಯುತವಾಗಿ ನಡೆದ ಪ್ರತಿಭಟನೆಗಳು ಕಾಲ ಕ್ರಮೇಣ ಹಿಂಸಾಚಾರದ ಹಾದಿ ಹಿಡಿದವು, ಇದಾದ ನಂತರ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಧಿಕಾರದಿಂದ ಕೆಳಗಿಳಿದ ಬಳಿಕ ಒಂಬತ್ತು ದಿನಗಳ ಕಾಲ ಸೇನಾ ರಕ್ಷಣೆಯಲ್ಲಿದ್ದು, ನಂತರ ಭಕ್ತಪುರದಲ್ಲಿರುವ ಖಾಸಗಿ ನಿವಾಸಕ್ಕೆ ತೆರಳಿದರು. ಮೂಲಗಳ ಮಾಹಿತಿ ಪ್ರಕಾರ, ಸದ್ಯ ಅವರು ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.(ಏಜೆನ್ಸೀಸ್​​)