ನ್ಯೂಸ್

video/ ಸಿ.ಪಿ.ಯೋಗೇಶ್ವರ್​ ಅಭಿನಯದ 'ಸೈನಿಕ' ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದ ಕಾಂಗ್ರೆಸ್​ ಕಾರ್ಯಕರ್ತರು

arunakunigal

ಬೆಂಗಳೂರು: ಕರೊನಾ ಛಾಯೆ ನಡುವೆಯೂ ನಾಡಿನ ಜನತೆ ಶಕ್ತಾನುಸಾರ 'ವರಮಹಾಲಕ್ಷ್ಮೀ' ಹಬ್ಬ ಆಚರಿಸುತ್ತಿದ್ದು, 'ಲಕ್ಷ್ಮೀ' ನಾಮಸ್ಮರಣೆ ಮೇಳೈಸಿದೆ. ಆದರೆ, ಯುವ ಕಾಂಗ್ರೆಸ್​ನ ಕಾರ್ಯಕರ್ತರು ಸಿ.ಪಿ.ಯೋಗೇಶ್ವರ್​ ನಾಯಕ ನಟನಾಗಿ ಅಭಿನಯಿಸಿರುವ 'ಸೈನಿಕ' ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

ಅರೆ, ಇದೇನಿದು ಕಾಂಗ್ರೆಸ್​ನ ಬದ್ಧವೈರಿಯಂತಿರುವ... ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ವಾಕ್ಸಮರ ಸಾರುತ್ತಿರುವ ಸಿ.ಪಿ.ಯೋಗೇಶ್ವರ್​ ಅವರನ್ನು ಕಂಡರೆ 'ಕೈ' ಕಾರ್ಯಕರ್ತರಿಗೆ ಅಷ್ಟೋಂದು ಅಭಿಮಾನವೇ? ಎಂದೆಲ್ಲ ಯೋಚಿಸಬೇಡಿ. ಇದು ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿಪ್ರತಿಮೆ ಬಳಿ ಶುಕ್ರವಾರ ಯೋಗೇಶ್ವರ್ ವಿರುದ್ಧ ಸಿನಿಮಾ ಸ್ಟೈಲ್​ನಲ್ಲಿ ಕುಣಿದು ಕುಪ್ಪಳಿಸುತ್ತ ಆಕ್ರೋಶ ಹೊರಹಾಕಿದ ಪರಿ. ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್​ ಮತ್ತು ಸಿ.ಪಿ.ಯೋಗೇಶ್ವರ್​ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಕೆಟ್​ ಹಿಡಿದು ಸಿನಿಮಾ ಹಾಡಿಗೆ ಡಾನ್ಸ್​ ಮಾಡುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್​ ಆಗಿದೆ.

ವಿಧಾನ ಪರಿಷತ್​ಗೆ ನಾಮನಿರ್ದೇಶನಗೊಂಡ ಬಳಿಕ ಸಿ.ಪಿ.ಯೋಗೇಶ್ವರ್, ಡಿಕೆಶಿ ಮತ್ತು ಎಚ್​ಡಿಕೆ ಅವರನ್ನು ನಿವೃತ್ತ ಕುದುರೆಗಳು ಎಂದು ಲೇವಡಿ ಮಾಡಿದ್ದರು. ಇದಾದ ಬೆನ್ನಲ್ಲೇ ಮಾಜಿ

ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಡಿಕೆ ಬ್ರದರ್ಸ್ ತೊಂದರೆ ನೀಡುತ್ತಿದ್ದಾರೆ. ಬಿಜೆಪಿಗೆ ಎಚ್​ಡಿಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಕುಮಾರಸ್ವಾಮಿ ಮತ್ತು ಜೆಡಿಎಸ್​ ಕಾರ್ಯಕರ್ತರು ಬಿಜೆಪಿಗೆ ಬರಲು ಮುಕ್ತ ಅವಕಾಶವಿದೆ ಎನ್ನುವ ಮೂಲಕ ಬಹಿರಂಗವಾಗಿಯೇ ಆಹ್ವಾನಿಸಿದ್ದರು.

ಯೋಗೇಶ್ವರ್​ರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಾರೀ ಸಂಚಲನ ಮೂಡಿಸಿತ್ತು. ಡಿಕೆ ಬ್ರದರ್ಸ್​ ಎಚ್​ಡಿಕೆಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಯೋಗೇಶ್ವರ್ ವಿರುದ್ಧ ಪ್ರತಿಭಟನೆ ನಡೆಸಿದರು.

ಸಿಪಿವೈ ಮುಖವಾಡಧಾರಿಗಳಾದ ಕಾಂಗ್ರೆಸ್​ ಕಾರ್ಯಕರ್ತರು ಬಕೆಟ್ ಹಿಡಿದುಕೊಂಡು 'ಬಕೆಟ್ ಯೋಗೇಶ್ವರ್' ಎಂದು ಘೋಷಣೆ ಕೂಗಿದರು. ಯೋಗೇಶ್ವರ್​ ಅಭಿನಯದ ಸಿನಿಮಾ ಹಾಡಿಗೆ ಬಕೆಟ್​ ಹಿಡಿದುಕೊಂಡೇ ಡ್ಯಾನ್ಸ್​ ಮಾಡಿ ವ್ಯಂಗ್ಯವಾಡಿದರು.