ಬೆಂಗಳೂರು: ಕರೊನಾ ನಿರ್ವಹಣೆಗೆ ಕಾಂಗ್ರೆಸ್ ಹಮ್ಮಿಕೊಂಡ "ಆರೋಗ್ಯ ಹಸ್ತ' ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ.
ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಶಾಸಕರು ಅಥವಾ 2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿ ಕಾಂಗ್ರೆಸ್ ಕರೊನಾ ವಾರಿಯರ್ಸ್ ಪಟ್ಟಿ ತಯಾರಿಸಲು ಮತ್ತು ಈ ಸಂಬಂಧ ಕಾರ್ಯನಿರ್ವಹಿಸುವ ಸಲುವಾಗಿ ಶಾಸಕ ಅಜಯ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್ ವಾರಿಯರ್ಸ್ಗೆ ವಿಮೆ ನೀಡುವ ಸಂಬಂಧ ಇಬ್ಬರು ಸಂಚಾಲಕರು ಮತ್ತು 17 ಸದಸ್ಯರನ್ನೊಳಗೊಂಡ ಸಮಿತಿ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶನಿವಾರ ಪ್ರಕಟಿಸಿದರು.
'ಆರೋಗ್ಯ ಹಸ್ತ' ಕಾರ್ಯಕ್ರಮವನ್ನು ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಗುರುವಾರ ಉದ್ಘಾಟಿಸಿದ್ದ ಡಿ.ಕೆ ಶಿವಕುಮಾರ್, 'ಕೆಪಿಸಿಸಿ ವೈದ್ಯರ ಘಟಕವು ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಅಧ್ಯಾಯ ಬರೆದಿದೆ. ಈ ಕಾರ್ಯಕ್ರಮ ಜನರ ಬಳಿಗೆ ಹೋಗಬೇಕು. ಕಾಂಗ್ರೆಸ್ ಕೇವಲ ಅಧಿಕಾರಕ್ಕೆ ಮಾತ್ರವಲ್ಲ, ಕಷ್ಟದಲ್ಲಿರುವ ಜನರ ಸೇವೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ' ಎಂದು ಹೇಳಿದ್ದರು.
'ಪ್ರತಿ ಪಂಚಾಯಿತಿ ಮತ್ತು ವಾರ್ಡ್ ಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಅವರನ್ನು ಕರೊನಾ ಕಾಂಗ್ರೆಸ್ ವಾರಿಯರ್ ಎಂದು ಕಳಿಸಿಕೊಡಲಾಗುತ್ತಿದೆ. ರಾಜ್ಯಾದ್ಯಂತ 15 ಸಾವಿರ ಯುವಕರನ್ನು ಕಾಂಗ್ರೆಸ್ ವಾರಿಯರ್ ಎಂದು ಗುರುತಿಸಲಾಗಿದೆ. ಈ ವಾರಿಯರ್ಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅವರಿಗೆ ವಿಮೆ ಮಾಡಿಸಲಾಗುತ್ತಿದೆ' ಎಂದು ವಿವರಿಸಿದ್ದರು.
ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕರು, ಪೌರ ಕಾರ್ಮಿಕರು, ಪೊಲೀಸರು, ಹೋಂ ಗಾರ್ಡ್ಗಳು, ಪೌರರಕ್ಷಣಾ ದಳ, ಅಗ್ನಿಶಾಮಕ ಸಿಬ್ಬಂದಿ, ಬಂದೀಖಾನೆ, ಸ್ಯಾನಿಟೈಸರ್ ಕಾರ್ಮಿಕರು ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ವಿಮೆ ಪರಿಹಾರ ನೀಡುವುದಾಗಿ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಪ್ರಕಟಿಸಿದೆ.
ಇದೀಗ ಕಾಂಗ್ರೆಸ್ ಹಮ್ಮಿಕೊಂಡಿರುವ "ಆರೋಗ್ಯ ಹಸ್ತ' ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ.