ನ್ಯೂಸ್

ಮಹಾರಾಷ್ಟ್ರದ ವಿಪಕ್ಷಗಳಲ್ಲಿ ಒಡಕು..?; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಕಾಂಗ್ರೆಸ್​ ನಿರ್ಧಾರ! | Maharashtra local body

ಮುಂಬೈ: ಮಹಾರಾಷ್ಟ್ರದ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ (Maharashtra Local Body) ಕಾಂಗ್ರೆಸ್​ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ನಾಯಕ ವಿಜಯ್ ವಡೆಟ್ಟಿವಾರ್ ಮಂಗಳವಾರ ( ನ 11) ಘೋಷಿಸಿದರು.

ಪಕ್ಷದ ಹೈಕಮಾಂಡ್‌ಗೆ ಈ ನಿರ್ಧಾರದ ಬಗ್ಗೆ ತಿಳಿಸಲಾಗಿದ್ದು, ಅದಕ್ಕೆ ಹಸಿರು ನಿಶಾನೆ ಸಿಕ್ಕಿದೆ, ಆದ್ದರಿಂದ ಪಕ್ಷವು ಮುಂಬೈ ಸೇರಿದಂತೆ ಎಲ್ಲಾ 246 ಪುರಸಭೆಗಳು ಮತ್ತು 42 ನಗರ ಪಂಚಾಯತ್‌ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.

ಕಾಂಗ್ರೆಸ್​ ಪಕ್ಷದ ಈ ನಿರ್ಧಾರವು ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಇತರ ಮಿತ್ರಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಈ ವಿಷಯವಾಗಿ ಮಾತನಾಡಿರುವ ಶಿವಸೇನೆ ವಕ್ತಾರ ಆನಂದ್ ದುಬೆ, ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನವನ್ನು ಟೀಕಿಸಿದ್ದು, ಕಾಂಗ್ರೆಸ್​, ಮಹಾರಾಷ್ಟ್ರದ ಇತರ ಪಕ್ಷಗಳನ್ನು ದೂಷಿಸುವ ಬದಲು ತಾನೇ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಶಿವಸೇನೆ (ಯುಬಿಟಿ) ಯಾವ ಪಕ್ಷವನ್ನು ಅವಲಂಬಿಸದೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಾಗಿದೆ ಎಂದು ತಿಳಿಸಿದರು.

ಈ ನಡುವೆ ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ನಡುವೆ ಹೆಚ್ಚುತ್ತಿರುವ ಅನ್ಯೋನ್ಯತೆಯ ಬಗ್ಗೆ ಕಾಂಗ್ರೆಸ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದು. ಹಿಂದು ಅಸ್ಮಿತೆ ಹೊಂದಿರುವ ಎಂಎನ್ಎಸ್ ಮಹಾ ವಿಕಾಸ್ ಅಘಾಡಿಗೆ ಸೇರಿದರೆ, ಅದರ ಸಾಂಪ್ರದಾಯಿಕ ಉತ್ತರ ಭಾರತೀಯ ಮತ್ತು ಅಲ್ಪಸಂಖ್ಯಾತ ಮತ ಬ್ಯಾಂಕ್‌ಗೆ ಧಕ್ಕೆಯಾಗಬಹುದು ಎಂಬ ಆತಂಕದಲ್ಲಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಘೋಷಣೆಯು ರಾಜ್ಯದಲ್ಲಿ ರಾಜಕೀಯ ಗೊಂದಲವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆಯ ನಿರ್ಧಾರ ಆಡಳಿತರೂಢ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಶಾಸಕ ಪ್ರವೀಣ್ ದಾರೇಕರ್, ಎಂವಿಎ ಮೈತ್ರಿಕೂಟ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಉದ್ಧವ್ ಠಾಕ್ರೆ ಅವರಂತೆಯೇ, ರಾಜ್ ಠಾಕ್ರೆ ಸಹ ಹಿಂದುತ್ವ ಸಿದ್ಧಾಂತದಿಂದ ದೂರ ಸರಿಯುತ್ತಿದ್ದಾರೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಡಿಸೆಂಬರ್ 2 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ .(ಏಜೆನ್ಸೀಸ್​)