ನವದೆಹಲಿ: ಕಾಂಗ್ರೆಸ್ನ ಲೋಕಸಭಾ ಸದಸ್ಯ ಎಚ್. ವಸಂತಕುಮಾರ್ ಕೋವಿಡ್ ಕಾಯಿಲೆಯಿಂದ ಶುಕ್ರವಾರ (ಆಗಸ್ಟ್ 28) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಇದೇ ಮೊದಲ ಬಾರಿಗೆ ಸಂಸದರಾಗಿದ್ದ ಎಚ್. ವಸಂತಕುಮಾರ್ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕರೊನಾ ಸೋಂಕಿಗೆ ಒಳಗಾಗಿ ಆಗಸ್ಟ್ 10 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯುಮೋನಿಯಾಗೂ ತುತ್ತಾಗಿದ್ದರಿಂದ ಅವರ ಸ್ಥಿತಿ ಗಂಭೀರವಾಗಿತ್ತು.
ಸಂಸದರಾಗುವ ಮುನ್ನ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವಸಂತಕುಮಾರ್ ನಿಧನಕ್ಕೆ ಪ್ರಧಾನಿ ನರೇಮದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಪ್ರಗತಿ ಬಗ್ಗೆ ಅವರಿಗಿದ್ದ ಕಾಳಜಿ ಪ್ರಶಂಸನೀಯ ಎಂದು ಅವರೊಂದಿಗಿನ ಮಾತುಕತೆಯನ್ನು ಸ್ಮರಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸಂತಾಪ ಸೂಚಿಸಿದ್ದಾರೆ. ವಸಂತಕುಮಾರ್ ಸಾವು ಆಘಾತ ನೀಡಿದೆ. ಕಾಂಗ್ರೆಸ್ ತತ್ವ- ಸಿದ್ಧಾಂತದ ಮೇಲೆ ಅವರಿಗಿದ್ದ ನಂಬಿಕೆ ಹಾಗೂ ಜನಸೇವೆ ಸದಾ ಹಸಿರಾಗಿರುತ್ತದೆ ಎಂದು ಹೇಳಿದ್ದಾರೆ.