ನ್ಯೂಸ್

'ಸಿಡಿ ಲೇಡಿ'ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಶಾಸಕಿಯರು!

arunakunigal

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ 'ಸಂತ್ರಸ್ತ' ಯುವತಿ ಪರ ಮಹಿಳಾ ಕಾಂಗ್ರೆಸ್​ ನಿಂತಿದೆ. ಒಬ್ಬ ರಾಜಕಾರಣಿಯಿಂದ ಆಕೆಗೆ ಅನ್ಯಾಯ ಆಗಿದ್ದರೂ ಸಂತ್ರಸ್ತೆಗೆ ಸರ್ಕಾರದಿಂದ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಸರ್ಕಾರದ ಮೇಲೆ ಆಕೆಗೆ ನಂಬಿಕೆ ಇಲ್ಲ, ಹಾಗಾಗಿ ಕಾಂಗ್ರೆಸ್​ ನಾಯಕರ ಬಳಿ ರಕ್ಷಣೆ ಕೋರಿದ್ದಾಳೆ. ಆ ಹೆಣ್ಣುಮಗಳ ರಕ್ಷಣೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ಶಾಸಕಿಯರು ಹೇಳಿದ್ದಾರೆ.

ಸಚಿವ ಡಾ.ಕೆ. ಸುಧಾಕರ್​ ನೀಡಿದ್ದ ಏಕಪತ್ನಿವ್ರತಸ್ಥ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ಶಾಸಕಿಯರು, ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು. ಶಾಸಕಿ ಲಕ್ಷ್ಮೀ‌ಹೆಬ್ಬಾಳ್ಕರ್ ಮಾತನಾಡಿದ, ಹೆಣ್ಣುಮಗಳು ನೊಂದಿದ್ದರೆ ನ್ಯಾಯ ಕೊಡಿಸುತ್ತೇವೆ. ನಾವೆಲ್ಲರೂ ಅವರಿಗೆ ನ್ಯಾಯ ಕೊಡಿಸುತ್ತೇವೆ ಎಂದರು. ಇದನ್ನೂ ಓದಿರಿ ಸಿದ್ದರಾಮಯ್ಯ, ಡಿಕೆಶಿ, ರಮೇಶ್​ಕುಮಾರ್​ ಅವರೇ ನನಗೆ ರಕ್ಷಣೆ ಕೊಡಿ ಎಂದ ಸಿಡಿ ಲೇಡಿ!

ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ ರಿಲೀಸ್ ಕುರಿತು ಮಾತನಾಡಿದ ಶಾಸಕಿ ರೂಪಾ ಶಶಿಧರ್, ಆತಂಕದಲ್ಲಿ ಆ ಹೆಣ್ಣುಮಗಳು ಇರಬಹುದು. ಸಿಎಂ ಮತ್ತು ಸರ್ಕಾರದ ಬಗ್ಗೆಯೂ ಆಕೆಗೆ ನಂಬಿಕೆಯಿಲ್ಲ. ಹಾಗಾಗಿ ಈ ರೀತಿಯಾಗಿ ಆತಂಕ ತೋಡಿಕೊಂಡಿರಬಹುದು. ಆ ತಾಯಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡ್ತೇವೆ. ಆ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಹಾಗಾಗಿಯೇ ನಾವು ಸದನದಲ್ಲಿ ಹೋರಾಟ ಮಾಡಿದ್ದು ಎಂದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಆ ಹೆಣ್ಣುಮಗಳು ಎಲ್ಲಿದ್ದಾಳೆ ಅನ್ನುವುದು ಗೊತ್ತಿಲ್ಲ. ಅವರನ್ನ ಪತ್ತೆ ಮಾಡುವುದಕ್ಕೆ ಆಗಿಲ್ಲ. ಈ ಬಿಜೆಪಿ ಸರ್ಕಾರದಲ್ಲಿ‌ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ. ಕೆಲಸ ಕೊಡಿಸಿ ಎಂದು ಬಂದ ಮಹಿಳೆಗೆ ಸಚಿವರು ಹೀಗೆಲ್ಲ‌ ಮಾಡೋದಾದರೆ ಬಿಜೆಪಿ ಮೇಲೆ ಹೇಗೆ ನಂಬಿಕೆ ಬರುತ್ತೆ? ಎಂದು ಕಿಡಿಕಾರಿದರು.

ಇದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್​, ರಾಮನ ಪಕ್ಷದಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಯಾರು ಅನುಮತಿ ಕೊಟ್ರು. ಶೋಭಾ ಕರಂದ್ಲಾಜೆ, ರೂಪಾಲಿ, ತೇಜಸ್ವಿನಿ ಇದನ್ನ ಒಪ್ಪಿಕೊಳ್ಳುತ್ತಾರಾ? ಡಾ.ಕೆ. ಸುಧಕಾರ್ ಬಳಿ ಏನಾದರೂ 224 ಶಾಸಕರ ಬಗ್ಗೆ ದಾಖಲೆ ಇದ್ರೆ ಕೋರ್ಟ್ ಮುಂದೆ ದಾಖಲಿಸಲಿ. ಪ್ರಧಾನಿ ಮತ್ತು ಗೃಹ ಸಚಿವರಿಗೆ ಈ ಮಾಹಿತಿ ಕಳಿಸುತ್ತೇವೆ. ಎಲ್ಲ ರಂಗದಲ್ಲೂ ಸಂಶಯವಾಗಿ ನೋಡುವ ಪ್ರವೃತ್ತಿ ಇವರ ಹೇಳಿಕೆಯಿಂದ ಶುರುವಾಗಿದೆ. ಪ್ರಮಾಣಿಕ ರಾಜಕಾರಣ ಮಾಡಿದವರು ಬಹಳ ಜನರು ಇದ್ದಾರೆ. ಇವರ ಹೇಳಿಕೆಯಿಂದ ಬಹಳ ಬೇಸರ ತರಿಸಿದೆ. ಇದು ಮಹಿಳಾ ಶಾಸಕಿಯರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.