ನ್ಯೂಸ್

ಬೆಂಗಳೂರು ಗಲಭೆಯಲ್ಲಿ ಖಂಡಿತ ಕೆಲವು ಕಾಂಗ್ರೆಸ್ ನಾಯಕರ ಕೈವಾಡ ಇದೆ: ರೋಷನ್​ ಬೇಗ್​

ಬೆಂಗಳೂರು ಗಲಭೆ ನಂತರ ಶಾಸಕ ಜಮೀರ್​ ಅಹ್ಮದ್​ ಖಾನ್​ ಮತ್ತು ಮಾಜಿ ಸಚಿವ ರೋಷನ್​ ಬೇಗ್​ ನಡುವೆ ನೇರಾನೇರ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಈಗಾಗಲೇ ಟ್ವಿಟರ್​ ಮೂಲಕ ಪರಸ್ಪರ ವಾಗ್ದಾಳಿ ನಡೆಸಿಕೊಂಡಿದ್ದಾರೆ.

ಕಾಂಗ್ರೆಸ್​ ನಾಯಕರಿಗೆ ಎಸ್​ಡಿಪಿಐ ಜತೆ ಸಂಪರ್ಕವಿದೆ ಎಂದು ನಿನ್ನೆ ರೋಷನ್​ ಬೇಗ್​ ಹೇಳಿದ್ದರು. ಅದಕ್ಕೆ ತೀವ್ರ ಕಿಡಿಕಾರಿದ್ದ ಜಮೀರ್​ ಅಹ್ಮದ್​​, ಡಿ.ಜೆ.ಹಳ್ಳಿ ಗಲಭೆಯ ಬಗ್ಗೆ ಇದುವರೆಗೆ ಮೌನವಹಿಸಿದ್ದ ರೋಷನ್​ ಬೇಗ್​ ಇದೀಗ ಒಮ್ಮೆಲೇ ಎಸ್​ಡಿಪಿಐನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರಿಗೆ ಪೊಲೀಸ್ ತನಿಖೆಯ ಸುಳಿವು ಸಿಕ್ಕಂತೆ ಕಾಣುತ್ತಿದೆ ಎಂದು ಟ್ವೀಟ್​ ಮಾಡಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್​ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು, ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸಗುಡಿಸಿ. ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 2023ರ ಚುನಾವಣೆಯಲ್ಲಿ ಟಿಕೆಟ್​ ನೀಡಬಹುದು ಎಂದು ಜಮೀರ್​ ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ: ಪೊಲೀಸ್​ ತನಿಖೆಯಲ್ಲಿ ಬಯಲಾಯ್ತು ನವೀನ್ ರಹಸ್ಯ

ಇದೀಗ ರೋಷನ್​ ಬೇಗ್​ ಮತ್ತೊಮ್ಮೆ ಜಮೀರ್​ ಹಾಗೂ ಕಾಂಗ್ರೆಸ್ ವಿರುದ್ಧ ಅದೇ ಆರೋಪ ಮಾಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ನಾನು ಹೋಗಿ ಅವರ ಮನೆ ವಾಚ್​ಮೆನ್​ ಆಗುತ್ತೇನೆ ಎಂದು ಯಾರು ಹೇಳಿದ್ದರೋ..ಅವರು ಹೋಗಿ ಅಲ್ಲಿ ವಾಚ್​ಮೆನ್​ ಕೆಲಸ ಮಾಡುವುದು ಒಳ್ಳೆಯದರು ಎಂದು ಜಮೀರ್​ ಅಹ್ಮದ್​ಗೆ ಟಾಂಗ್​ ನೀಡಿದ್ದಾರೆ.

ನಾವು ವಿದ್ಯಾರ್ಥಿ ಜೀವನದಿಂದ ಚಳವಳಿ ಮಾಡಿಕೊಂಡು ಬೆಳೆದು ಬಂದವರು. ಇಂಥವರಿಂದ ಯಾವುದೇ ಪಾಠ ಕಲಿಯಬೇಕಾಗಿಲ್ಲ. ಎಸ್​​ಡಿಪಿಐಗೂ ನನಗೂ ಸಂಬಂಧವಿಲ್ಲ. ಆದರೆ ಬೆಂಗಳೂರು ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರ ಕೈವಾಡ ಇದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಹಾಗೇ ಗಲಭೆಗೆ ಸಂಬಂಧಪಟ್ಟಂತೆ ಕೆಲವು ಅಮಾಯಕರನ್ನು ಬಂಧಿಸಲಾಗಿದೆ. ಇಂಥ ಘಟನೆ ಆದಾಗ ಅದು ಸಹಜ ಕೂಡ. ಅಂಥವರನ್ನು ಪೊಲೀಸರು ಬಿಡಲಿ. ಆದರೆ ಕಳಾಸಿಪಾಳ್ಯ, ಗೋರಿಪಾಳ್ಯ, ಟಿಪ್ಪುನಗರದಿಂದ ಗಲಾಟೆ ಮಾಡಲೆಂದೇ ಬಂದವನ್ನು ಬಿಡಬಾರದು. ಅವರೆಲ್ಲ ಇಲ್ಲಿಗ್ಯಾಕೆ ಬರಬೇಕು ಎಂದು ರೋಷನ್​ ಬೇಗ್​ ಹೇಳಿದ್ದಾರೆ.