Nobel Peace Prize: ವೆನೆಜುವೆಲಾದ ಪ್ರಮುಖ ವಿಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದ್ದು, ಇದರಿಂದ ಪ್ರೇರೆಪಿತಗೊಂಡಿರುವ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ಪ್ರಶಸ್ತಿಗೆ ಅರ್ಹರು ಎಂದು ಹೇಳಿಕೊಂಡಿದ್ದಾರೆ.
ಈ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಜಪೂತ್, ಭಾರತದಲ್ಲಿ ಸಂವಿಧಾನ ಉಳಿವಿಗಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿ ಕೂಡ ನೊಬೆಲ್ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದರು.
ಐದು ಬಾರಿ ಲೋಕಸಭಾ ಸಂಸದರಾಗಿರುವ ಮಚಾದೊ ಅವರ ಜೊತೆಗೆ ಇರುವ ಚಿತ್ರವನ್ನು ಹಂಚಿಕೊಂಡ ರಜಪೂತ್, ಈ ಬಾರಿ ಸಂವಿಧಾನವನ್ನು ರಕ್ಷಿಸಿದ್ದಕ್ಕಾಗಿ ವೆನೆಜುವೆಲಾದ ವಿರೋಧ ಪಕ್ಷದ ನಾಯಕರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಭಾರತದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಅದೇ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಬ್ಬರ ನಡುವೆ ಅನೇಕ ಸಾಮ್ಯತೆಗಳಿವೆ ಎಂದು ಬರೆದುಕೊಂಡಿದ್ದಾರೆ. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಶಾಂತಿಯುತ ಪರಿವರ್ತನೆಯನ್ನು ಪ್ರತಿಪಾದಿಸುವ ಅಚಲ ಬದ್ಧತೆಗಾಗಿ ನಾರ್ವೇಜಿಯನ್ ನೊಬೆಲ್ ಸಮಿತಿಯು ಮಚಾದೊ ಅವರನ್ನು ಗುರುತಿಸಿ ಗೌರವಿಸಿದೆ. ಕಳೆದ ವರ್ಷ ಚುನಾವಣೆಯ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದ ಮತ್ತು ತಲೆಮರೆಸಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಿದ್ದರೂ ಸಹ, ಮಚಾದೊ ವೆನೆಜುವೆಲಾದ ವಿರೋಧ ಪಕ್ಷವನ್ನು ಒಗ್ಗೂಡಿಸುಗೊಂಡ ವ್ಯಕ್ತಿಯಾಗಿದ್ದಾರೆ.
ಭಾರತದಲ್ಲಿ, ರಾಹುಲ್ ಗಾಂಧಿ ಅವರು ಪ್ರಸ್ತುತ ಎನ್‌ಡಿಎ ಸರ್ಕಾರದ ಸರ್ವಾಧಿಕಾರದ ವಿರುದ್ಧ ಯುದ್ಧವನ್ನು ನಡೆಸಿದ್ದಾರೆ ಎಂದು ಕಾಂಗ್ರೆಸ್ ಅನೇಕ ವರ್ಷಗಳಿಂದ ಹೇಳಿಕೊಳ್ಳುತ್ತಾ ಬಂದಿದೆ. ಇತ್ತೀಚೆಗೆ ರಾಹುಲ್, ಮತ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಮತ ಕಳ್ಳತನ ನಡೆದಿದೆ ಎಂದು ಮತ್ತು ಬಿಹಾರದ ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಮತದಾರರ ಹೆಸರನ್ನು ತೆಗೆದುಹಾಕುತ್ತಿದೆ, ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಲಾಭವಾಗುವಂತೆ ಇವಿಎಂ ಹ್ಯಾಕಿಂಗ್, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕೊನೆಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಧ್ವನಿ ಎತ್ತಿದ್ದಾರೆ.
ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ, ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ, ಅಲ್ಪಸಂಖ್ಯಾತ ಮತ್ತು ಎಸ್‌ಸಿ/ಎಸ್‌ಟಿ ಹಕ್ಕುಗಳು ರಾಜಿಯಾಗಿವೆ ಎಂದು ಆರೋಪಿಸಿ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳನ್ನು ಎದುರಿಸಲು ಭಾರತದ ಎಲ್ಲ ವಿರೋಧ ಪಕ್ಷಗಳು ಕಾಂಗ್ರೆಸ್‌ನ ಬೆಂಬಲಕ್ಕೆ ನಿಂತಿವೆ. ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷವು, ಎನ್‌ಡಿಎ ಸರ್ಕಾರದ ಆಡಳತದಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಸತ್ತುಹೋಗಿವೆ ಮತ್ತು ಕಾಂಗ್ರೆಸ್ ನಾಯಕರು ಅದನ್ನು ರಕ್ಷಿಸಲು ಹೋರಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಬಿಜೆಪಿ ವ್ಯಂಗ್ಯ...
ಕಾಂಗ್ರೆಸ್ ನಾಯಕ ರಜಪೂತ್ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಇದು ವಿಚಿತ್ರ ಎಂದು ಕರೆದಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರು ರಾಹುಲ್ ಬಾಬಾಗೆ ನೊಬೆಲ್ ಪ್ರಶಸ್ತಿಯನ್ನು ಬೇಡುತ್ತಿರುವುದು ವಿಚಿತ್ರ ಸಂಗತಿ. ನೊಬೆಲ್ ಪ್ರಶಸ್ತಿಯ ಮಾನದಂಡದಲ್ಲಿ ಬೂಟಾಟಿಕೆ, ಸುಳ್ಳು ಹೇಳುವುದು, 99 ಬಾರಿ ಚುನಾವಣೆಗಳಲ್ಲಿ ಸೋಲುವುದು, 1975 ಮತ್ತು 1984 ರಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕೊಲೆ ಮಾಡುವುದು ಎಂಬ ಅಂಶಗಳಿದ್ದರೆ ವಿಪಕ್ಷ ನಾಯಕರು ಅದನ್ನು ಪಡೆಯುತ್ತಿದ್ದರೋ, ಏನೋ ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್)