ನ್ಯೂಸ್

ಕಾಂಗ್ರೆಸ್ ಬೇಜವಾಬ್ದಾರಿ ಪಕ್ಷ; ಹಿಂದುಗಳನ್ನು ಒಡೆಯುವ, ದ್ವೇಷ ಹರಡುವ ಕಾರ್ಖಾನೆ

ನಾಗಪುರ: ‘ಕಾಂಗ್ರೆಸ್ ಒಂದು ಬೇಜವಾಬ್ದಾರಿ ಪಕ್ಷ, ದ್ವೇಷವನ್ನು ಹರಡುವ ಕಾರ್ಖಾನೆ. ಹಿಂದುಗಳನ್ನು ಒಡೆದು, ಇತರ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವುದೇ ಕಾಂಗ್ರೆಸ್ ನಾಯಕರ ಮಹತ್ಕಾರ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಮಹಾರಾಷ್ಟ್ರದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದ ಜನರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ತೋರಿಸಿಕೊಟ್ಟಿದೆ. ನಗರ ನಕ್ಸಲೀಯರು ಮತ್ತು ಕಾಂಗ್ರೆಸ್ಸಿಗರ ಸಂಚುಗಳಿಗೆ ಜನರು ಬಲಿಯಾಗುವುದಿಲ್ಲ’ ಎಂದು ಹೇಳಿದರು. ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮಹಾರಾಷ್ಟ್ರವನ್ನು ದುರ್ಬಲಗೊಳಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಆದರೆ ಆಡಳಿತಾರೂಢ ಮಹಾಯುತಿ (ಬಿಜೆಪಿ, ಶಿವಸೇನೆ, ಎನ್​ಸಿಪಿ ಮೈತ್ರಿಕೂಟ) ರಾಜ್ಯವನ್ನು ಸರ್ವತೋಮುಖವಾಗಿ ಸಬಲಗೊಳಿಸಲು ಯತ್ನಿಸುತ್ತಿದೆ ಎಂದು ಮೋದಿ ಹೇಳಿದರು. ಮಹಾರಾಷ್ಟ್ರ ವಿಧಾನಸಭೆಯ 228 ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ.

ಮಹಾರಾಷ್ಟ್ರದ ವಿವಿಧ ವಲಯಗಳಲ್ಲಿ ಹಿಂದೆಂದೂ ನಡೆಯದಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಾಂಗ್ರೆಸ್ ಆಡಳಿತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತು ವೇಗ ದಲ್ಲಿ ನಡೆಯುತ್ತಿದ್ದುದು ಭ್ರಷ್ಟಾಚಾರ ಮಾತ್ರ ಎಂದು ಆರೋಪಿಸಿದರು. ದೇಶದ ಮುಸ್ಲಿಮರಲ್ಲಿ ಭಯ ಹುಟ್ಟಿಸಿ ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಲು ಕಾಂಗ್ರೆಸ್ ಬಯಸಿದೆ. ರಾಜಕೀಯ ಲಾಭಕ್ಕಾಗಿ ಹಿಂದುಗಳನ್ನು ಒಡೆದು ಜಾತಿ ರಾಜಕಾರಣ ಮಾಡುತ್ತಿದೆ. ಇಂಥ ವಿಭಜಕ ರಾಜಕೀಯ ಮಾಡುವವರ ಬಗ್ಗೆ ಜನ ಎಚ್ಚರದಿಂದಿರ ಬೇಕು. ಹರಿಯಾಣದಂತೆ ಮಹಾರಾಷ್ಟ್ರದ ಜನರೂ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡಬೇಕು ಎಂದರು.

ದಲಿತರಲ್ಲಿ ಸುಳ್ಳುಗಳನ್ನು ಹರಡಲು ಕಾಂಗ್ರೆಸ್ ಯತ್ನಿಸಿತು. ಆದರೆ ತಮ್ಮ ಮೀಸಲಾತಿಯನ್ನು ಕಿತ್ತುಕೊಂಡು ಬೇರೆ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ಹವಣಿಸಿರುವುದನ್ನು ಹರಿಯಾಣದ ದಲಿತ ಸಮುದಾಯ ಅರಿತುಕೊಂಡು ಬಿಜೆಪಿಯನ್ನು ಬೆಂಬಲಿಸಿತು. ರೈತರನ್ನೂ ಎತ್ತಿಕಟ್ಟಲು ಕಾಂಗ್ರೆಸ್ ಮುಂದಾಯಿತು. ಆದರೆ ತಮಗೆ ಕನಿಷ್ಠ ಬೆಂಬಲ ಬೆಲೆ ಕೊಟ್ಟವರು ಯಾರು ಎಂಬುದು ರೈತರಿಗೆ ಗೊತ್ತಿತ್ತು ಎಂದು ಮೋದಿ ವಿಶ್ಲೇಷಿಸಿದರು.

ಮುಸ್ಲಿಮರಲ್ಲಿಯೂ ಜಾತಿಗಳಿವೆ ಎಂಬ ಬಗ್ಗೆ ಮಾತನಾಡಲು ಯಾವುದೇ ಕಾಂಗ್ರೆಸ್ ನಾಯಕ ಸಿದ್ಧನಿಲ್ಲ. ಮುಸ್ಲಿಮರಲ್ಲಿ ಜಾತಿಯ ವಿಷಯ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ಅದೇ ಹಿಂದುಗಳ ವಿಷಯ ಬಂದಾಗ ಕಾಂಗ್ರೆಸ್ ನಾಯಕರು ಅದರಲ್ಲಿನ ವಿವಿಧ ಜಾತಿಗಳ ಬಗ್ಗೆ ಮಾತನಾಡತೊಡಗುತ್ತಾರೆ. ಅವರನ್ನು ಒಡೆದರೆ ಮಾತ್ರ ತಮಗೆ ಲಾಭ ಎಂಬ ಭಾವನೆ ಕಾಂಗ್ರೆಸ್ಸಿಗರದು ಎಂದು ವಿವರಿಸಿದರು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸು ದ್ವೇಷ ಹರಡುವ ಕಾರ್ಖಾನೆ ಆಗುತ್ತದೆ ಎಂಬುದು ಗಾಂಧೀಜಿಗೆ ಗೊತ್ತಿತ್ತು. ಹಾಗಾಗಿಯೇ ಅವರು ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂಬ ಮಾತುಗಳನ್ನಾಡಿದ್ದರು. ಆದರೆ ಕಾಂಗ್ರೆಸ್ ನಾಶವಾಗಲಿಲ್ಲ, ಬದಲಿಗೆ ದೇಶವನ್ನು ನಾಶ ಮಾಡಲು ಕಾಂಗ್ರೆಸ್ ಹೊರಟಿದೆ. ಅದರ ಸಂಚುಗಳಿಗೆ ಮಹಾರಾಷ್ಟ್ರದ ಜನ ಬಲಿ ಆಗುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಮೋದಿ ಹೇಳಿದರು.

ಹರಿಯಾಣ ಫಲಿತಾಂಶ ಅನಿರೀಕ್ಷಿತ ಎಂದ ರಾಗಾ: ಹರಿಯಾಣ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ವಿರುದ್ಧ ಮೂರನೇ ಬಾರಿಗೆ ಸೋತಿರುವ ಬಗ್ಗೆ ಕೊನೆಗೂ ಮೌನ ಮುರಿದಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಈ ಫಲಿತಾಂಶ ನಮಗೆ ಅನಿರೀಕ್ಷಿತ. ಏಕೆ ಹೀಗಾಯ್ತು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಪ್ರಾಮುಖ್ಯತೆ ಯನ್ನು ಒತ್ತಿ ಹೇಳಿದ ರಾಹುಲ್, ಕಾಂಗ್ರೆಸ್ ಪಕ್ಷ ಹರಿಯಾಣದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಸ್ವೀಕರಿಸಿದ ವಿವಿಧ ದೂರುಗಳನ್ನು ಚುನಾವಣಾ ಆಯೋಗಕ್ಕೆ ಔಪಚಾರಿಕವಾಗಿ ವರದಿ ಮಾಡಲಿದೆ ಎಂದು ತಿಳಿಸಿದ್ದಾರೆ.