ನ್ಯೂಸ್

ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ

ಬೆಂಗಳೂರು: ಕಾಂಗ್ರೆಸ್ ಇದೀಗ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದು ಏಳು ಅಭ್ಯರ್ಥಿಗನ್ನು ಘೋಷಣೆ ಮಾಡಿದೆ. ಬಿಜೆಪಿ ತೊರೆದು ಕಾಂಗ್ರೆಸ್​ಗೆ ಬಂದಿರುವ ಜಗದೀಶ್ ಶೆಟ್ಟರ್​ಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ಬಿಜೆಪಿಯ ಸಿ.ಟಿ.ರವಿ ಅವರನ್ನು ಸೋಲಿಸಲು ಯೋಜನೆ ಹಾಕಿಕೊಂಡಿದೆ. ಅದರಂತೆ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಬಂದಿದ್ದ ಎಚ್​.ಡಿ. ತಮ್ಮಯ್ಯ ಅವರಿಗೆ ಟಿಕೆಟ್ ನೀಡಿದೆ. ಕುರುಬ ಸ್ವಾಮೀಜಿ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್ ಹರಿಹರ ಕ್ಷೇತ್ರಕ್ಕೆ ರಾಮಪ್ಪ ಬದಲು ನಂದಿಗಾವಿ ಶ್ರೀನಿವಾಸ್​ಗೆ ಟಿಕೆಟ್ ನೀಡಿದೆ. 

224 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಈ‍ವರೆಗೆ 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಟಿಕೆಟ್ ನೀಡಿದೆ. ಇನ್ನುಳಿದಂತೆ ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಬೇಕಿದೆ. ಪುಲಕೇಶಿ ನಗರ, ಸಿ.ವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ನಗರ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ, ಕೆ.ಆರ್ ಪುರಂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿದಿದೆ.