ನ್ಯೂಸ್

ಲೋಕ ಸಮರ: ಮಾರ್ಚ್​ 10ರೊಳಗೆ ಕಾಂಗ್ರೆಸ್ ಮೊದಲ ಪಟ್ಟಿ​? ಕಾಂಗ್ರೆಸ್‌ನ ಸಂಭಾವ್ಯರ ಪಟ್ಟಿ ರೆಡಿ, ಯಾರಿಗೆಲ್ಲ ಟಿಕೆಟ್‌?

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್‌ ತಾವ್ಡೆ ಅವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಕರ್ನಾಟಕದ ಯಾವ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಲ್ಲ. ಇನ್ನೂ ಕೆಲವು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಹೊಸ ಮುಖಗಳಿಗೆ ಅವಕಾಶ ಸಾಧ್ಯತೆ ಹೆಚ್ಚಿದೆ. ಇತ್ತ ಕಾಂಗ್ರೆಸ್‌ ಪಕ್ಷ ಕೂಡಾ ಪಟ್ಟಿ ಬಿಡುಗಡೆಗೆ ಸಿದ್ಧತೆ ಮಾಡುತ್ತಿದೆ. ಮೂಲಗಳ ಪ್ರಕಾರ, ಮೊದಲ ಪಟ್ಟಿ ಮಾರ್ಚ್‌ 10ರೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎಲ್ಲರಲ್ಲೂ ಒಮ್ಮತ ಮೂಡದೇ ಇರುವುದರಿಂದ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಕೆ ಹೈಕಮಾಂಡ್​ ತಲುಪುದು ಸ್ವಲ್ಪ ತಡವಾಗಿದೆ. ಮುಂದಿನ ವಾರದೊಳಗೆ ಫೈನಲ್ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ದಿಲ್ಲಿಗೆ ಕರೆಸಿಕೊಂಡಿದೆ. ಈ ಸಂದರ್ಭದಲ್ಲಿ ಐಎನ್​ಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರೊಂದಿಗೆ ಮತ್ತೊಂದು ಸುತ್ತು ಮಾತುಕತೆ ನಡೆಸಿ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತ್ಯೇಕ ಸರ್ವೇ ನಡೆಸಿದ ವರದಿಗಳ ಆಧಾರದ ಮೇಲೆ ಎರಡು ಪಟ್ಟಿಗಳು ಇರುತ್ತವೆ. ಇದರ ಜತೆಗೆ ಸಂಭವನೀಯ ಅಂದರೆ ಹೆಚ್ಚು ಗೆಲುವಿನ ಸಾಧ್ಯತೆ ಇರುವ,‌ ಪ್ರಮುಖ ನಾಯಕರು ಗುರುತಿಸಿದಂತೆ ಸಿದ್ಧಪಡಿಸಿದ ಮೂರನೇ ಪಟ್ಟಿಯನ್ನು ಕೂಡಾ ಹೈಕಮಾಂಡ್​ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಯಾವ ಅಭ್ಯರ್ಥಿಗಳ ಬಗ್ಗೆ ಸರ್ವೇ?: ಮಂಡ್ಯಕ್ಕೆ ಸ್ಟಾರ್ ಬಿಲ್ಡರ್ ಚಂದ್ರು, ಚಾಮರಾಜನಗರ ಕ್ಷೇತ್ರದಲ್ಲಿ ಡಾ ಎಚ್‌ ಸಿ ಮಹದೇವಪ್ಪ, ಬಳ್ಳಾರಿಯಲ್ಲಿ ಬಿ ನಾಗೇಂದ್ರ, ಚಿತ್ರದುರ್ಗದಲ್ಲಿ ಬಿ ಎನ್‌ ಚಂದ್ರಪ್ಪ, ತುಮಕೂರಿನಲ್ಲಿ ಮುದ್ದಹನುಮೇಗೌಡ, ಹಾಸನದಲ್ಲಿ ಶ್ರೇಯಸ್‌ ಪಟೇಲ್‌, ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್‌, ದಕ್ಷಿಣ ಕನ್ನಡ ವಿನಯ್‌ ಕುಮಾರ್‌ ಸೊರಕೆ ಅವರನ್ನು ಸಂಭಾವ್ಯ ಅಭ್ಯರ್ಥಿಗಳಾಗಿ ಗುರುತಿಸಿ ಸರ್ವೇ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

ಉಡುಪಿ-ಚಿಕ್ಕಮಗಳೂರಿನಿಂದ ಕೆ ಜಯಪ್ರಕಾಶ್‌ ಹೆಗ್ಡೆ, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ ಅಥವಾ ವೀರಪ್ಪ ಮೊಯ್ಲಿ ಮತ್ತು ಕೋಲಾರದಿಂದ ಸಚಿವ ಕೆ ಎಚ್‌ ಮುನಿಯಪ್ಪ ಅವರನ್ನು ಕಣಕ್ಕಿಳಿಸಲು ಬಯಸಿ ಈ ಅಭ್ಯರ್ಥಿಗಳ ಬಗ್ಗೆ ಸರ್ವೇ ವರದಿ ಎದುರು ನೋಡಲಾಗುತ್ತಿದೆ.

ರಾಯಚೂರಿನಿಂದ ನಿವೃತ್ತ ಐಎಎಸ್‌ ಅಧಿಕಾರಿ ಜಿ ಕುಮಾರ್‌ ನಾಯಕ್‌ ಅಥವಾ ಸತೀಶ್‌ ಜಾರಕಿಹೊಳಿ ಸಂಬಂಧಿ ರವಿ ನಾಯಕ್‌ ಈ ಇಬ್ಬರಲ್ಲಿ ಯಾರು ಅಭ್ಯರ್ಥಿಯಾಗುವುದು ಸೂಕ್ತ ಎಂಬ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ರಮೇಶ್‌ ಕತ್ತಿ ಅವರನ್ನು ಪಕ್ಷಕ್ಕೆ ಕರೆತಂದು ಚಿಕ್ಕೋಡಿಯಿಂದ ಕಣಕ್ಕಿಳಿಸಿದರೆ ಫಲಿತಾಂಶ ಏರನಿರುತ್ತದೆ ಎಂಬ ಬಗ್ಗೆಯೂ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ.

ಬೆಳಗಾವಿಯಿಂದ ಕಣಕ್ಕಿಳಿಯುವಂತೆ ಪಕ್ಷ ನೀಡುವ ಆಫರ್‌ಗೆ ಸಚಿವ ಸತೀಶ್‌ ಜಾರಕಿಹೊಳಿ ತಮ್ಮ ಪ್ರತಿಕ್ರಿಯೆಯನ್ನು ಕಾಯ್ದಿರಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಡಿ ಕೆ ಸುರೇಶ್‌ ಹಾಗೂ ಮೈಸೂರಿನಿಂದ ಲಕ್ಷ್ಮಣ್‌ ಅವರನ್ನು ಕಣಕ್ಕಿಳಿಸಲು ಪ್ರಸ್ತಾಪಿಸಲಾಗಿದೆ.