ಬೆಂಗಳೂರು: ಇಲ್ಲಿ ಯಾರೂ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರಿಲ್ಲ, ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಗರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು.
ನಗರದಲ್ಲಿ ಮಂಗಳವಾರ (ಡಿ.03) ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್ ಸಮಾವೇಶದ ಹೆಸರು ಬದಲಾವಣೆಯ ತೀರ್ಮಾನದಿಂದ ಸಿದ್ದರಾಮಯ್ಯ ಅವರ ನಿಷ್ಠರಿಗೆ ಅಸಮಾಧಾನವಾಗಿದೆ ಎಂದು ಕೇಳಿದಾಗ, ಡಿಕೆಶಿ ಉತ್ತರಿದ್ದು ಹೀಗೆ.
“ಕಾಂಗ್ರೆಸ್ ಪಕ್ಷ ಸುಧೀರ್ಘ ಇತಿಹಾಸ ಹೊಂದಿರುವ ದೊಡ್ಡ ಪಕ್ಷ. ಕಾಂಗ್ರೆಸ್ ಪಕ್ಷದ ಜತೆ ಯಾವುದೇ ಸಂಘ ಸಂಸ್ಥೆಗಳು ಸೇರಿಕೊಳ್ಳಬಹುದು. ಆದರೆ ಕಾಂಗ್ರೆಸ್ ಬೇರೆಯವರ ಜತೆ ಸೇರಿಕೊಳ್ಳುವುದಿಲ್ಲ. ನಾನು ಈ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಭಾಗವಹಿಸುತ್ತಿದ್ದೇನೆ. ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರಾಗಿ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ನೇತೃತ್ವದಲ್ಲೇ ಸಮಾವೇಶ ನಡೆಯಲಿದೆ. ನಮ್ಮ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಸಾಧನೆಗಳು ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸುಳ್ಳುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಸಮಾವೇಶ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, “ವಿಕಲಚೇತನತೆ ವರವೂ ಅಲ್ಲ, ಶಾಪವೂ ಅಲ್ಲ. ದೇವರು ನಿಮಗೆ ಜೀವನದಲ್ಲಿ ನೀಡಿರುವ ಪರೀಕ್ಷೆ. ಇದನ್ನು ಮೆಟ್ಟಿನಿಂತ ಅನೇಕರು ಸಾಧನೆ ಮಾಡಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ನೀವೂ ಇದನ್ನು ಅನುಸರಿಸಿ” ಎಂದು ಡಿಸಿಎಂ ವಿಕಲಚೇತನರಿಗೆ ಕಿವಿಮಾತು ಹೇಳಿದರು.
“ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿಮ್ಮನ್ನು ದೇವರ ಮಕ್ಕಳು ಎಂದು ಕರೆದರು. ನಿಮಗೆ ಗಣಪತಿಯೇ ಸ್ಫೂರ್ತಿ. ಆನೆ ತಲೆ, ಮುರಿದ ಒಂದು ದಂತವಿದ್ದರೂ ಆತನನ್ನು ವಿಘ್ನವನ್ನು ನಿವಾರಿಸುವ ನಾಯಕ ವಿನಾಯಕ ಎಂದು ಪೂಜಿಸುತ್ತೇವೆ. ಹೀಗಾಗಿ ನಿಮ್ಮಿಂದ ಏನೂ ಮಾಡಲು ಆಗುವುದಿಲ್ಲಎಂದು ಭಾವಿಸಬೇಡಿ” ಎಂದು ತಿಳಿಸಿದರು.