ನ್ಯೂಸ್

Congress Manifesto 2023: ಬಿಜೆಪಿ ಜಾರಿಗೆ ತಂದ ಕಾನೂನುಗಳು ಒಂದು ವರ್ಷದೊಳಗೆ ರದ್ದು , ಬಜರಂಗದಳ ನಿಷೇಧ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಅಭ್ಯರ್ಥಿಗಳು ಈಗಾಗಲೇ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ನಿನ್ನೆ ಪ್ರಾಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್​​ ಕೂಡಾ ಪ್ರಾಣಾಳಿಕೆ ಬಿಡುಗಡೆ ಮಾಡಿ ತಮ್ಮದೇ ಆಗಿರುವ ಕೆಲವು ಯೋಜನೆಗಳನ್ನು ತರುವುದಾಗಿ ತಿಳಿಸಿದೆ.  ಬಿಜೆಪಿ ಆಢಳಿತಾವಧಿಯಲ್ಲಿ ತಂದಿರುವ ಕಾನೂನು ಹಾಗೂ ಯೋಜನೆಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್​​ ತನ್ನ ಪ್ರಣಾಳಿಕೆಯಲ್ಲಿ ಪ್ರಸಾಪಿಸಿದೆ.

ಬಿಜೆಪಿ ಒಳ ಮೀಸಲಾತಿ ರದ್ದುಗೊಳಿಸಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ ಮಾಡಲಾಗುತ್ತದೆ. ಎಸ್‍ಸಿ-ಎಸ್‍ಟಿ ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಪ್ರಣಾಳಿಕೆ ಮೂಲಕವಾಗಿ ಕಾಂಗ್ರೆಸ್​​ ತಿಳಿಸಿದೆ.

ಬಿಜೆಪಿ ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳು ಒಂದು ವರ್ಷದಲ್ಲಿ ರದ್ದುಗೊಳಿಸುವುದರ ಜೊತೆಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್‍ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ರದ್ದುಗೊಳಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಪಠ್ಯಪುಸ್ತಕ ಮರಳಿ ಪರಿಷ್ಕರಣೆಗೊಳಿಸಲಾಗುವುದು. ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ ಮಾಡಲಾಗುತ್ತದೆ. ಪಿಯುಸಿಯಿಂದ ಪಿಜಿವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್, ಡಿಜಿಟಲ್ ನೋಟ್ ಪ್ಯಾಡ್ ಉಚಿತವಾಗಿ ನೀಡಲಾಗುವುದು.

ಬಿಜೆಪಿ ಜಾರಿಗೆ ತಂದ ಪ್ರಮುಖ ಕಾನೂನುಗಳನ್ನು ಒಂದು ವರ್ಷದೊಳಗೆ ರದ್ದು ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಮೂಲಕವಾಗಿ ಘೋಷಣೆ ಮಾಡಿದೆ.