ನ್ಯೂಸ್

ಕೈ-ಕಮಲ ಅಗ್ನಿವೀರ ಸಮರ: ಯೋಜನೆ ಸಮರ್ಥಿಸಿಕೊಂಡ ಬಿಜೆಪಿ; ಹಸ್ತ ಪಡೆ ಟೀಕಾಪ್ರಹಾರ

ಅಗ್ನಿವೀರ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಮರವೇ ನಡೆದಿದೆ. ಬಿಜೆಪಿ ಯೋಜನೆ ಯನ್ನು ಸಮರ್ಥಿಸಿಕೊಂಡು, ಸೇನಾಧಿಕಾರಿಗಳು ಪ್ರಕಟಿಸಿದ ಅಂಶಗಳನ್ನು ಪ್ರಕಟಿಸಿ ಪ್ರತಿಪಕ್ಷವನ್ನು ಕೆಣಕಿದೆ. ಪ್ರತಿಯಾಗಿ ಕಾಂಗ್ರೆಸ್, ನಾಲ್ಕು ವರ್ಷದ ಬಳಿಕ ಯುವಕನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಯೋಜನೆ ಇದು ಎಂದು ಟೀಕಿಸಿದೆ.

ಬಿಜೆಪಿ ವಾದವೇನು?

  • ಅಗ್ನಿಪಥ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ದೇಶದ ಯುವಶಕ್ತಿಗೆ ಪ್ರೇರಣೆ ನೀಡಬಲ್ಲ ಏಕೈಕ ಮಾರ್ಗವಿದು. ಅಗ್ನಿಪಥ ಯೋಜನೆಯಿಂದ ಸೇನೆಯ ರೆಜಿಮೆಂಟ್ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲವೆಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅವರು ಸ್ಪಷ್ಟಪಡಿಸಿದ್ದಾರೆ.
  • ಮೂರೂ ವಿಭಾಗದ ಸೇನಾಪಡೆಗಳ ಮುಖ್ಯಸ್ಥರು ಅಗ್ನಿಪಥ ಯೋಜನೆಯನ್ನು ಸ್ವಾಗತಿಸಿದ್ದಾರೆ. ಸೇನೆಯ ಆಗುಹೋಗು, ಅನಿವಾರ್ಯತೆ ಬಗ್ಗೆ ಮಾತನಾಡಬೇಕಿರುವುದು ಸೇನಾ ಮುಖ್ಯಸ್ಥರೇ ಹೊರತು ಕಾಂಗ್ರೆಸ್ ನಾಯಕರಲ್ಲ. ಸೇನೆಯ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದು ತರವಲ್ಲ.
  • ಸೇನೆಗೆ ಸೇರಲಿಚ್ಛಿಸುವವರು ಅಗ್ನಿಪಥ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿಲ್ಲ ಎಂದು ಪ್ರಮಾಣಪತ್ರ ನೀಡುವುದು ಕಡ್ಡಾಯ ಎಂದು ಅನಿಲ್ ಪುರಿ ಅವರು ಹೇಳಿಕೆ ನೀಡಿದ್ದಾರೆ. ಯುವಜನತೆಯನ್ನು ಪ್ರತಿಭಟನೆ, ಗಲಭೆ, ದೊಂಬಿಯ ಹಾದಿ ಹಿಡಿಸಿದ ಕಾಂಗ್ರೆಸ್ ಸೇನೆ ಸೇರ ಬಯಸಿದ್ದ ಸಾವಿರಾರು ಯುವಜನತೆಯ ಅವಕಾಶಕ್ಕೆ ಮಣ್ಣು ಹಾಕಿದೆ.
  • ಅಗ್ನಿಪಥ ಯೋಜನೆ ಮೂಲಕ ಸೇವೆ ಸಲ್ಲಿಸಿ ಹೊರಬರುವ ಅಗ್ನಿವೀರರಿಗೆ ದೇಶಕ್ಕೆ ದೇಶವೇ ಉದ್ಯೊಗಾವಕಾಶಗಳ ಭರವಸೆ ನೀಡುತ್ತಿದೆ. ಭಾರತದ ದೈತ್ಯ ಉದ್ಯಮ ಸಂಸ್ಥೆಗಳು, ಕಾರ್ಪೆ ರೇಟ್ ಕಂಪನಿಗಳು ಉದ್ಯೋಗದ ಭರವಸೆ ನೀಡಿವೆ. ಸಶಸ್ತ್ರ ಪಡೆ ಗಳಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಅಗ್ನಿವೀರರಿಗೆ ಅನೇಕ ರಾಜ್ಯ ಸರ್ಕಾರಗಳು ಉದ್ಯೋಗದ ಮೀಸಲಾತಿ ಘೊಷಿಸಿದೆ. ಆದರೂ, ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿರತವಾಗಿದೆ.
ಕಾಂಗ್ರೆಸ್ಸಿಗರೇ, ನೀವೇಕೆ ದೇಶದ ವಿರುದ್ಧ ಹೋಗುತ್ತಿದ್ದೀರಿ? ಸೇನೆಯನ್ನು ದುರ್ಬಲವಾಗಿಡುವುದು ನಿಮ್ಮ ಆಶಯವೇ? | ಬಿಜೆಪಿ ಕರ್ನಾಟಕ ಅಮೆರಿಕ, ಇಂಗ್ಲೆಂಡ್ ದೇಶದಲ್ಲಿ 2 ವರ್ಷ ಕಡ್ಡಾಯವಾಗಿ ಸೈನಿಕ ಶಿಕ್ಷಣ ಕಲಿಸುತ್ತಾರೆ. ಮುಂದುವರಿದ ದೇಶಗಳು ಇಂತಹ ಆದರ್ಶ ಇಟ್ಟುಕೊಂಡು ಉತ್ತಮ ಯಶಸ್ಸು ಕಂಡಿವೆ. ನಮ್ಮ ದೇಶದಲ್ಲಿ ಅಗ್ನಿಪಥ ವಿನೂತನ ಪ್ರಸ್ತಾವನೆಯಾಗಿದ್ದು, ಇದರಲ್ಲಿ ರಾಜಕೀಯವಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ತರಲು ಅವಕಾಶ ನೀಡಬೇಕು. | ಎಸ್.ಎಂ.ಕೃಷ್ಣ ಮಾಜಿ ಮುಖ್ಯಮಂತ್ರಿ

ಕಾಂಗ್ರೆಸ್ ನಾಯಕರು ಹೇಳೋದೇನು?

  • ಅಗ್ನಿವೀರರಿಗೆ ಡ್ರೖೆವರ್, ಸೆಕ್ಯೂರಿಟಿ ಗಾರ್ಡ್, ಎಲೆಕ್ಟ್ರಿಷಿಯನ್​ನಂತಹ ಕೌಶಲ ತರಬೇತಿ ನೀಡುತ್ತೇವೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ನಮ್ಮದು ಒಂದೇ ಪ್ರಶ್ನೆ ಇವೆಲ್ಲ ತರಬೇತಿ ನೀಡಬೇಕಾದ ಕೌಶಲ ಅಭಿವೃದ್ಧಿ ಇಲಾಖೆ ಏನು ಮಾಡುತ್ತಿದೆ? ಅದರ ಜವಾಬ್ದಾರಿ ಏನು? ಆ ಇಲಾಖೆಯನ್ನು ಮುಚ್ಚುವಿರಾ?
  • ಅಗ್ನಿಪಥ ಯೋಜನೆ ನಿರುದ್ಯೋಗಿಗಳನ್ನು ತಯಾರು ಮಾಡುವುದೇ ಹೊರತು ಯೋಧರನ್ನಲ್ಲ. ನಿಯಮದ ಅನುಸಾರ ‘ನಿವೃತ್ತ ಯೋಧ’ ಎಂದು ಪರಿಗಣಿಸಲು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು, 4 ವರ್ಷ ಸೇವೆ ಮಾಡುವ ಅಗ್ನಿವೀರರಿಗೆ ಆ ಗೌರವವೂ ದೊರಕುವುದಿಲ್ಲ.
  • ಬಿಜೆಪಿಯವರೇ, ಸೈನಿಕರಿಗೆ ನೀಡುವ ಸಂಬಳ, ಭತ್ಯೆ, ಪೆನ್ಶನ್ ಹಣವನ್ನು ಉಳಿಸಲು ದೇಶದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಂಡು ಸೇನೆಯ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದೀರಿ. ಸೈನಿಕರನ್ನು ಗುತ್ತಿಗೆ ಅವಧಿಗೆ ನೇಮಕ ಮಾಡಿಕೊಳ್ಳುವುದು ದೇಶದ ಆತ್ಮಹತ್ಯಾ ಹಾದಿಯೇ ಸರಿ.
  • ‘ಅಗ್ನಿಪಥ’ ಯೋಜನೆ ಈ ದೇಶದ ಸರ್ವನಾಶದ ಯೋಜನೆ. ಸೇನೆ ಸೇರುವ ಅವಕಾಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಕರು ನಿಮ್ಮ ವಿರುದ್ಧ ನಿಂತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಈ ಯೋಜನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ನೆನಪಿಡಿ ನೀವು ಈ ಯೋಜನೆಯನ್ನು ಹಿಂಪಡೆಯಲೇ ಬೇಕು. ಹಿಂಪಡೆಯುತ್ತೀರಿ. ಯುವಕರನ್ನು ಸಂಘದ ಸ್ವಯಂ ಸೇವಕರ ಮಾಡುವ ಹುನ್ನಾರ ನಿಲ್ಲಿಸಿ. | ಕರ್ನಾಟಕ ಕಾಂಗ್ರೆಸ್

ಅಗ್ನಿವೀರರಿಗೆ ಉದ್ಯೋಗ ಮೀಸಲು

ಉಡುಪಿ: ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹಿಂತಿರುಗುವ ಅಗ್ನಿವೀರರಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಗಳ ದೈಹಿಕ ಶಿಕ್ಷಕ ಹುದ್ದೆಯಲ್ಲಿ ಶೇ.75 ಮೀಸಲಾತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅದೇ ರೀತಿ ವಾರ್ಡನ್ ಹುದ್ದೆಯಲ್ಲೂ ಅಗ್ನಿವೀರರಿಗೆ ಅವಕಾಶ ನೀಡಲಾಗುವುದು. ಮೀಸಲಾತಿ ನಿಯಮ ಪ್ರಕಾರ ನೇಮಕಾತಿ ನಡೆಯಲಿದೆ. ಇತರ ಹುದ್ದೆಗಳಲ್ಲೂ ಆದ್ಯತೆ ನೀಡಲು ಕಡತ ಮಂಡಿಸುವಂತೆ ಟಿಪ್ಪಣಿ ನೀಡಿದ್ದೇನೆ ಎಂದರು.