ನ್ಯೂಸ್

ಗಣಿನಾಡು ಸಂಡೂರು ಆಧಿಪತ್ಯಕ್ಕಾಗಿ ಕೈ-ಕಮಲ ಜಿದ್ದಾಜಿದ್ದಿ; ರೆಡ್ಡಿ, ಲಾಡ್​ಗೆ ಸತ್ವಪರೀಕ್ಷೆ

ತಾಳೂರು ಎಸ್.ಎರ್ರಿಸ್ವಾಮಿ ಬಳ್ಳಾರಿ
ಉಪಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಸ್ಟಿ ಸಮುದಾಯಕ್ಕೆ ಮೀಸಲಾಗಿರುವ ಸಂಡೂರು ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಕೈಪಡೆಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲಿದ್ದರೆ ಕಮಲ ಪಾಳಯಕ್ಕೆ ಕ್ಷೇತ್ರ ಗೆದ್ದು ಇತಿಹಾಸ ಸೃಷ್ಟಿಸುವ ಗುರಿ ಇದೆ.

ಕಳೆದ ನಾಲ್ಕು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಪತ್ಯ ಹೊಂದಿದೆ. ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಹಠ ತೊಟ್ಟಿದ್ದಾರೆ. ಸತತ ಐದನೇ ಬಾರಿಗೆ ಕಾಂಗ್ರೆಸ್ ಗೆಲ್ಲಿಸಿ ಬಿಜೆಪಿಗೆ ಠಕ್ಕರ್ ನೀಡಲು ಸ್ಥಳೀಯರೇ ಆದ ಕಾರ್ವಿುಕ ಸಚಿವ ಸಂತೋಷ ಲಾಡ್ ಹಾಗೂ ಬಳ್ಳಾರಿ ಸಂಸದ ಈ. ತುಕಾರಾಮ್ ಜೋಡಿ ಸಜ್ಜಾಗಿದೆ.

ಕೈ ಪಾಳಯಕ್ಕಿಂತ ಬಿಜೆಪಿಯಲ್ಲೇ ಟಿಕೆಟ್ ಅಕಾಂಕ್ಷಿಗಳು ಹೆಚ್ಚಿದ್ದಾರೆ. ಕಾಂಗ್ರೆಸ್​ನಿಂದ ಈ. ತುಕಾರಾಮ್ ಪತ್ನಿ ಅನ್ನಪೂರ್ಣ ಸ್ಪರ್ಧಿಸುವುದು ಖಚಿತವಾಗಿದ್ದು, ಆಧಿಕೃತ ಘೊಷಣೆಯಷ್ಟೇ ಬಾಕಿಯಿದೆ ಎಂದು ಹೇಳಲಾಗುತ್ತಿದೆ.

ಇನ್ನು ಬಿಜೆಪಿ ಪಾಳಯದಲ್ಲಿ ಕಳೆದ ಬಾರಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್​ಪಿಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್.ದಿವಾಕರ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತ, ಮಾಜಿ ಸಂಸದ ವೈ. ದೇವೇಂದ್ರಪ್ಪ ಹಾಗೂ ಅವರ ಪುತ್ರ ಅಣ್ಣಪ್ಪ, ಶಿಲ್ಪಾ ರಾಘವೇಂದ್ರ ಹೆಸರು ಮುಂಚೂಣಿಯಲ್ಲಿವೆ.

ರೆಡ್ಡಿ ಬೆಂಬಲದಿಂದ ಬಿಜೆಪಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ಕೆ.ಎಸ್.ದಿವಾಕರ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಹೀಗಾಗಿ ಸಂಡೂರು ಕ್ಷೇತ್ರದ ಟಿಕೆಟ್ ನೀಡಿ ಎಂಬುದು ವೈ.ದೇವೇಂದ್ರಪ್ಪ ಕೋರಿಕೆ. ವಯಸ್ಸಿನ ಕಾರಣಕ್ಕೆ ನನಗೆ ಟಿಕೆಟ್ ನೀಡದಿದ್ದರೆ ಪುತ್ರ ಅಣ್ಣಪ್ಪಗೆ ನೀಡಬೇಕೆಂಬುದು ಅವರ ಬೇಡಿಕೆಯಾಗಿದೆ.

2018ರ ಚುನಾವಣೆಯಲ್ಲಿ ಶಿಲ್ಪಾ ಪತಿ ರಾಘವೇಂದ್ರ ಸ್ಪರ್ಧಿಸಿ ಸೋತಿದ್ದರು. ಪತಿ ನಿಧನರಾದ ಹಿನ್ನೆಲೆಯಲ್ಲಿ 2023ರಲ್ಲಿ ಶಿಲ್ಪಾ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದರೆ, ಅವರಿಗೆ ಮತದಾರರ ಅನುಕಂಪ ಸಿಕ್ಕಿರಲಿಲ್ಲ. ಈ ಬಾರಿ ಅನುಕಂಪ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಶಿಲ್ಪಾ ಇದ್ದಾರೆ. ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಿಜೆಪಿಗೆ ಬಂಡಾಯದ ಬಿಸಿ ಎದುರಾದರೂ ಅಚ್ಚರಿಯಿಲ್ಲ.

ಗಣಿಧಣಿಗಳ ಪಾರುಪತ್ಯಕ್ಕೆ ವೇದಿಕೆ: ಸಂಡೂರು ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಗಣಿ ಧಣಿಗಳ ನಡುವಿನ ಪಾರುಪತ್ಯಕ್ಕೆ ವೇದಿಕೆಯಾಗಲಿದೆ. ಕಾಂಗ್ರೆಸ್ ಅನ್ನು ಸಚಿವ ಸಂತೋಷ್ ಲಾಡ್ ಮುನ್ನಡೆಸಿದರೆ ಬಿಜೆಪಿಯನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಮುನ್ನಡೆಸುವಂತೆ ಕಂಡುಬರುತ್ತಿದೆ. ಗಣಿ ಅಕ್ರಮ ಪ್ರಕರಣಗಳಿಂದಾಗಿ 13 ವರ್ಷಗಳ ಬಳಿಕ ಬಳ್ಳಾರಿಯಲ್ಲೇ ವಾಸ್ತವ್ಯಕ್ಕೆ ಅವಕಾಶ ಪಡೆದಿರುವ ಜನಾರ್ದನರೆಡ್ಡಿ ಜಿಲ್ಲೆಗೆ ಭೇಟಿ ನೀಡಿದ ಮರು ದಿನವೇ ಸಂಡೂರಿಗೆ ತೆರಳಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಆದರೆ, ಮಾಜಿ ಸಚಿವ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಬಹಿರಂಗವಾಗಿ ಒಟ್ಟಿಗೆ ಕಾಣಿಸಿಕೊಳ್ಳದಿರುವುದು ಬಿಜೆಪಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

14 ಬಾರಿ ಕಾಂಗ್ರೆಸ್ ಪರ ಒಲವು: ಸಂಡೂರು ಕ್ಷೇತ್ರದಲ್ಲಿ 1957 ರಿಂದ 2023ರವರೆಗೆ ಒಂದು ಉಪ ಚುನಾವಣೆ ಸೇರಿ 16 ಚುನಾವಣೆ ನಡೆದಿವೆ. ಈ ಪೈಕಿ 1985ರಲ್ಲಿ ಸಿಪಿಐನಿಂದ ಯು.ಭೂಪತಿ ಹಾಗೂ 2004ರಲ್ಲಿ ಜೆಡಿಎಸ್​ನಿಂದ ಸಂತೋಷ ಲಾಡ್ ಗೆದ್ದಿದ್ದರು. 14 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿ ಕ್ಷೇತ್ರ ಕೈ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ, ಒಳಮೀಸಲಾತಿ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವುದು, ಜಿಂದಾಲ್​ಗೆ ಸರ್ಕಾರ ಜಮೀನು ನೀಡಿರುವುದು, ಕೈಗಾರಿಕೆಗಳಿಗೆ ವಶಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಬೆಲೆ ನೀಡಬೇಕೆಂಬ ಬೇಡಿಕೆಗಳು ಕಾಂಗ್ರೆಸ್​ಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಅಲ್ಲದೆ, ನಾಲ್ಕು ಬಾರಿ ಶಾಸಕರಾಗಿದ್ದ ಈ. ತುಕಾರಾಮ್ ಕುಟುಂಬಕ್ಕೆ ಮತ್ತೆ ಮನ್ನಣೆ ನೀಡುತ್ತಿರುವ ಬಗ್ಗೆಯೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ.

ಮತ ಲೆಕ್ಕಾಚಾರ: ಸಂಡೂರು ಕ್ಷೇತ್ರದಲ್ಲಿ 1,17,789 ಪುರುಷ, 1,18,282 ಮಹಿಳಾ ಹಾಗೂ 29 ತೃತೀಯ ಲಿಂಗಿಗಳು ಸೇರಿ 2,36,100 ಮತದಾರರಿದ್ದಾರೆ. ಎಸ್ಟಿ 65 ಸಾವಿರ, ಎಸ್ಸಿ 40 ಸಾವಿರ, ಲಿಂಗಾಯತ 35 ಸಾವಿರ, ಕುರುಬರು 30 ಸಾವಿರ, ಮುಸ್ಲಿಂ 10 ಸಾವಿರ, ಹಾಗೂ ಬ್ರಾಹ್ಮಣ, ಶೆಟ್ಟಿ, ಕಮ್ಮ, ಬಲಿಜ ಜಾತಿ ಹಾಗೂ ಇತರ ಸಮುದಾಯದ 40 ಸಾವಿರಕ್ಕೂ ಹೆಚ್ಚು ಮತಗಳಿವೆ.