ಲಖನೌ: ದೇಶದಲ್ಲಿ 18ನೇ ಸಾರ್ವತ್ರಿಕ ಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪ ಮಾಡುವುದು ಸಹಜ. ಅದೇ ರೀತಿ ಇದೀಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಗಂಭೀರವಾದ ಆರೋಪ ಒಂದನ್ನು ಮಾಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಲಖನೌನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಒಂದು ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಗೆದ್ದು ಅಧಿಕಾರಕ್ಕೆ ಬಂದರೆ ಗೋಮಾಂಸ ಸೇವನೆಗೆ ಅವಕಾಶ ನೀಡುವ ಗುರಿ ಹೊಂದಿದೆ ಎಂದು ಆರೋಪಿಸಿದ್ದಾರೆ.
ಭಾರತದಲ್ಲಿ ಹಿಂದೂ ಧರ್ಮವು ಗೋವುಗಳನ್ನು ಪವಿತ್ರ ಎಂದು ಪರಿಗಣಿಸಿ ಪೂಜಿಸುತ್ತಾರೆ. ಮುಸ್ಲಿಮರಿಗೆ ವಿನಾಯಿತಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಗೋಮಾಂಸ ಸೇವನೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. ಈ ಕ್ರಮವು ಸ್ವೀಕಾರಾರ್ಹವಲ್ಲ ಆದ ಕಾರಣ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಕ್ಕೆ ಬಂದರೆ ಸಂಪತ್ತು, ಜಾತಿ ಸಮೀಕ್ಷೆಯನ್ನು ಮಾಡಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ. ಈ ಮೂಲಕ ಕಾಂಗ್ರೆಸ್ ಒಂದು ಧರ್ಮವನ್ನು ಓಲೈಸಲು ಮುಂದಾಗಿದ್ದು, ಕಾಂಗ್ರೆಸ್ನ ಈ ಮನೋಭಾವಕ್ಕೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.