ನ್ಯೂಸ್

ಆಫ್ಘನ್ ಜತೆಗಿನ ಸಂಘರ್ಷ: ಗಡಿ ಪ್ರದೇಶದಲ್ಲಿ ವ್ಯಾಪಾರ ಬಂದ್, ಪಾಕ್​ನಲ್ಲಿ ಕೆಜಿ ಟೊಮ್ಯಾಟೋಗೆ -600 ರೂ!

ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಜತೆಗಿನ ಗಡಿ ಸಂಘರ್ಷದಲ್ಲಿ ನಲುಗುತ್ತಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವಿಶೇಷವಾಗಿ ಟೊಮಾಟೋ ಧಾರಣೆ ವಿಪರೀತ ಹೆಚ್ಚಾಗಿದೆ. ಬೆಲೆ ಶೇಕಡ 400ರಷ್ಟು ಏರಿಕೆಯಾಗಿದ್ದು, ಒಂದು ಕೆಜಿ ಟೊಮಾಟೋ ಬೆಲೆ ಪಾಕ್​ನ 600 ರೂಪಾಯಿಯಷ್ಟಾಗಿದೆ. ಅಫ್ಘಾನಿಸ್ತಾನದ ಜತೆಗಿನ ಘರ್ಷಣೆ ಹಿನ್ನೆಲೆಯಲ್ಲಿ ಗಡಿ ಕ್ರಾಸಿಂಗ್​ಗಳು ಮುಚ್ಚಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ಈ ತಿಂಗಳ ಆರಂಭದಲ್ಲಿ ಉಭಯ ನೆರೆಹೊರೆ ದೇಶಗಳ ನಡುವೆ ಸಂಘರ್ಷ ಹೆಚ್ಚಾಗಿತ್ತು. ಈ ಕಾರಣಕ್ಕೆ ತಾಲಿಬಾನ್ ಸರ್ಕಾರ ಪಾಕ್​ನ ಗಡಿ ಪ್ರದೇಶಗಳಲ್ಲಿ ವ್ಯಾಪಾರವನ್ನು ಬಂದ್ ಮಾಡಿದೆ.

ಪ್ರತಿ ದಿನ ದಶಲಕ್ಷ ಡಾಲರ್ ನಷ್ಟ: ಅಕ್ಟೋಬರ್ 11ರಿಂದ ಎಲ್ಲ ವಾಣಿಜ್ಯ ಮತ್ತು ಸಂಚಾರ ಮಾರ್ಗಗಳು ಬಂದ್ ಆಗಿರುವುದರಿಂದ ತಾಜಾ ಉತ್ಪನ್ನಗಳು, ದವಸಧಾನ್ಯಗಳು, ಹಾಲಿನ ಉತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ. ಗಡಿ ಮುಚ್ಚಿ ವಾಣಿಜ್ಯ ವ್ಯವಹಾರಗಳು ಅಸ್ತವ್ಯಸ್ತಗೊಂಡಿರುವುದರಿಂದ ‘ಎರಡೂ ಕಡೆಯವರಿಗೆ ಪ್ರತಿ ನಿತ್ಯ ಸುಮಾರು ಒಂದು ದಶಲಕ್ಷ ಡಾಲರ್ ಹಣ ನಷ್ಟವಾಗುತ್ತಿದೆ’ ಎಂದು ಕಾಬೂಲ್​ನಲ್ಲಿರುವ ಪಾಕ್-ಆಫ್ಘನ್ ವಾಣಿಜ್ಯ ಮಂಡಳಿಯ ಅಧ್ಯಕ್ಷ ಖಾನ್ ಜಾನ್ ಅಲೊಕೋಝೆ ಹೇಳಿದ್ದಾರೆ.

500 ಕಂಟೇನರ್ ತರಕಾರಿ ಹಾಳು

ಪಾಕಿಸ್ತಾನದ ಅಡುಗೆ ಮನೆಗಳ ಅಚ್ಚುಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಒಂದಾಗಿರುವ ಟೊಮ್ಯಾಟೋ ಮೇಲೆ ವಿಶೇಷ ಪರಿಣಾಮ ಬೀರಿದೆ. ಗಡಿ ಮುಚ್ಚಿರುವುದರಿಂದ, ರಫ್ತಿಗೆ ಕಾದಿರುವ ಸುಮಾರು 500 ಕಂಟೇನರ್ ತರಕಾರಿಗಳು ಕೊಳೆಯುತ್ತಿವೆಯೆಂದು ಅಲೊಕೋಝೆ ತಿಳಿಸಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿ ಸುಮಾರು 5,000 ಕಂಟೇನರ್​ಗಳು ಸಿಕ್ಕಿಹಾಕಿಕೊಂಡಿವೆ.