ನ್ಯೂಸ್

ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ... ನಾದಬ್ರಹ್ಮ ಹಂಸಲೇಖ ವಿರುದ್ಧ ದೂರು ದಾಖಲು

ಬೆಂಗಳೂರು: ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಹಂಸಲೇಖ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ‌. ಸಾಮಾಜಿಕ ಸಾಮರಸ್ಯಕ್ಕಾಗಿ ಪೇಜಾವರ ಶ್ರೀಗಳು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಲೇವಡಿ ಮಾಡಿದ್ದಾರೆ. ಅಲ್ಲದೆ ನನ್ನ ಆರಾಧ್ಯ ದೈವ ಬಿಳಿಗಿರಿರಂಗನಾಥನ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿ ಶ್ರೀಗಳ ಶಿಷ್ಯವೃಂದ ಕೃಷ್ಣರಾಜ ಎಂಬುವರು ದೂರು ನೀಡಿದ್ದಾರೆ.

ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಪೇಜಾವರ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಡಿಯೋ ವೈರಲ್​ ಆಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಚರ್ಚೆ ಮತ್ತು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹಂಸಲೇಖ ಕ್ಷಮೆ ಕೋರಿದ್ದರು. ಪೇಜಾವರ ವಿಶ್ವಪ್ರಸನ್ನ ಶ್ರೀಗಳೂ ಸಹ ಬೇಸರ ವ್ಯಕ್ತಪಡಿಸಿದ್ದರು.