ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿ ವಾಗ್ಮಿ, ಚಿಂತಕ, ಅಂಕಣಕಾರ, ಬರಹಗಾರರ ಮತ್ತು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕಿ ಸೌಗಂಧಿಕಾ ರಘುನಾಥ್ ಎಂಬುವರಿಂದ ದೂರು ದಾಖಲಾಗಿದೆ. ನಿನಗೆ ಎಲ್ಲಿ? ಯಾಕೆ ಉರಿ ಬಂತೋ ಗೊತ್ತಿಲ್ಲ ಎಂದು ಫೇಸ್ಬುಕ್ನಲ್ಲಿ ಅವಾಚ್ಯವಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಸೌಗಂಧಿಕಾ ರಘುನಾಥ್ ಆರೋಪ ಮಾಡುತ್ತಿದ್ದಾರೆ.
ಚಂದ್ರಯಾನ 3 ಯಶಸ್ವಿ ಆಗಲಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ಚಕ್ರವರ್ತಿ ಸೂಲಿಬೆಲೆ, ಎಲ್ಲರೂ ದೇವಸ್ಥಾನಗಳಿಗೆ ಹೋಗಿ ಕೈಮುಗಿದು ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿ ಎಂದು ಹೇಳಿದ್ದರು.
ಚಕ್ರವರ್ತಿ ಸೂಲಿಬೆಲೆ ಪೋಸ್ಟಿಗೆ ಸೌಗಂಧಿಕಾ ರಘುನಾಥ್ ಕಾಮೆಂಟ್ ಮಾಡಿ, ದೇವಸ್ಥಾನಕ್ಕೆ ಪೂಜೆ ಮಾಡುವುದು ತಪ್ಪಲ್ಲ ಆದರೆ, ಫೊಟೋ ಹಾಕಿ ಅಂತ ಹೇಳಿರುವುದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದಿದ್ದರು.
ನಾನು ಕಾಮೆಂಟ್ ಮಾಡಿದ ಬಳಿಕ ಸಾಕಷ್ಟು ನಕಲಿ ಖಾತೆಗಳಿಂದ ನನ್ನ ತೇಜೋವಧೆಗೆ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ನಾನು ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ಸ್ವತಃ ಸೂಲಿಬೆಲೆ ಅವರೇ ಕಮೆಂಟ್ ಮಾಡಿ, ನಿನಗೆ ಏನು ಉರಿಯುತ್ತೆ ಎಂದು ಹೇಳಿದ್ದಾರೆ ಎಂದು ಸೌಗಂಧಿಕಾ ಆರೋಪ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)