ನ್ಯೂಸ್

ಬೀಡಿಯೊಂದಿಗೆ ಬಿಹಾರವನ್ನು ಹೋಲಿಸಿ, ಬಿಹಾರಿಗಳಿಗೆ ಅವಮಾನ ಮಾಡಿದ್ದಾರೆ; ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ| PM Modi

PM Modi: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಜಿಎಸ್​ಟಿ ಪರಿಷ್ಕರಣೆಯಲ್ಲಿ ಬೀಡಿ, ಸಿಗರೇಟ್​ನ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್​ ಘಟಕ ಮಾಡಿದ್ದ ಟ್ವೀಟ್ ಉಲ್ಲೇಖಿಸಿ ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಬೀಡಿಯೊಂದಿಗೆ ಬಿಹಾರವನ್ನು ಹೋಲಿಸಿ ಅವಮಾನ ಮಾಡಿದ್ದಾರೆ ಎಂದು ಸೋಮವಾರ(ಸೆ. 15) ಕಿಡಿಕಾರಿದ್ದಾರೆ.

ಬಿಹಾರದ ಪೂರ್ಣಿಯಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನಾಯಕರು 'ಬೀಡಿಗಳು' ಮತ್ತು ಬಿಹಾರ ಬಿ ಯಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಇದು ಬಿಹಾರ ಮತ್ತು ಬಿಹಾರದ ಜನರಿಗೆ ಮಾಡಿದ ಅವಮಾನ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್-ಆರ್​ಜೆಡಿಯನ್ನು ತರಾಟೆಗೆ ತಗೆದುಕೊಂಡ ಅವರು, ರಾಜ್ಯದಲ್ಲಿ ನುಸುಳುಕೋರರನ್ನು ಪೋಷಿಸುತ್ತಿದ್ದಾರೆ. ಆದರೆ ಎನ್​ಡಿಎ ಸರ್ಕಾರ ಅವರನ್ನು ಇಲ್ಲಿಂದ ಓಡಿಸುತ್ತದೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ದುರಾಡಳಿತದಿಂದಾಗಿ ಬಿಹಾರವು ಬಹಳಷ್ಟು ನಷ್ಟ ಅನುಭವಿಸಿದೆ. ಈಗಿನ ಬಿಹಾರ ಅಭಿವೃದ್ಧಿಯನ್ನು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ತಾಯಂದಿರು ಮತ್ತು ಸಹೋದರಿಯರು  ಅವರಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂದರು.

ದೇಶದ ಅಭಿವೃದ್ಧಿ, ಸುರಕ್ಷತೆ, ಭದ್ರತೆಯಲ್ಲಿ ಬಿಹಾರ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಕುಟುಂಬಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದಾರೆ. ಆದರೆ ನಮಗೆ 'ಸಬ್‌ಕಾ ಸಾಥ್ ಸಬ್‌ಕಾ ವಿಶ್ವಾಸ್' ನಲ್ಲಿ ನಂಬಿಕೆಯಿದೆ. ಬಡವರನ್ನು ಬೆಂಬಲಿಸುವುದು ಈ ಮೋದಿ ಅವರ ಧ್ಯೇಯ ಎಂದು ಹೇಳಿದರು. (ಏಜೆನ್ಸೀಸ್)