ನ್ಯೂಸ್

ಆಡಳಿತ ಸುಧಾರಣೆಗೆ ಆಯೋಗದ ವೇಗ; ಅಕ್ರಮ ರೇಷನ್ ಕಾರ್ಡ್​ಗೆ ಕತ್ತರಿ

ಮೋಹನ್​ ಶೆಟ್ಟಿ
  • ಬಿಪಿಎಲ್​ಗೆ 200 ಯುನಿಟ್ ಮಿತಿ
  • ಅನಗತ್ಯ ನಿಗಮ-ಮಂಡಳಿ ಬಂದ್ ಹಲವು ಮಹತ್ವದ ಶಿಫಾರಸು

ಬೆಂಗಳೂರು: ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಪಾರದರ್ಶಕ ಆಡಳಿತ ತರಲು ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ತನ್ನ 8ನೇ ವರದಿ ಸಲ್ಲಿಸಿದೆ. ಪಡಿತರ ಚೀಟಿ ಹಂಚಿಕೆಯಲ್ಲಿನ ದೋಷ ಪರಿಹಾರ, ಸರ್ಕಾರಿ ಸಿಬ್ಬಂದಿ ಕೊರತೆ ನಿವಾರಣೆ, ದೇವಾಲಯದಲ್ಲಿ ಮತ್ತಷ್ಟು ಸುಧಾರಣೆ ಸೇರಿ ಹತ್ತುಹಲವು ಶಿಫಾರಸುಗಳನ್ನು ಮುಂದಿಟ್ಟಿರುವುದು ವಿಶೇಷವಾಗಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ನೇತೃತ್ವದ ನಿಯೋಗ ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿತು. ಬಳಿಕ ಸುದ್ದಿಗೋಷ್ಠಿ ನಡೆಸಿದ ದೇಶಪಾಂಡೆ ಅವರು, ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಾಮಾನ್ಯ ಜನರಿಗೆ ಯೋಜನೆ ತಲುಪಿಸುವ ಸಲುವಾಗಿ ಆಯೋಗದಿಂದ ಈ ವರದಿ ಸಲ್ಲಿಸಲಾಗಿದೆ. ಒಟ್ಟಾರೆ ಆಡಳಿತಾತ್ಮಕ ಸುಧಾರಣೆಗೆ 5,039 ಶಿಫಾರಸು ಮಾಡಲಾಗಿದ್ದು, 1506 ಅನುಷ್ಠಾನಗೊಂಡಿವೆ ಎಂದರು. ಅಪರ ಮುಖ್ಯಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ಪಡಿತರ ಸೇವೆಯಲ್ಲಿ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ವರದಿ ಸಲ್ಲಿಸಿದ್ದು, ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ಯಾರೆಲ್ಲ ಹೊರಗಿರಬೇಕು?

ವಾರ್ಷಿಕ 1.2 ಲಕ್ಷ ರೂ.ಗೂ ಅಧಿಕ ಆದಾಯ, ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚಿನ ಒಣ ಭೂಮಿ, 1 ಸಾವಿರ ಚದರ ಅಡಿಗಿಂತ ಹೆಚ್ಚು ಪಕ್ಕಾ ಮನೆ, ಸರ್ಕಾರಿ, ಅನುದಾನಿತ, ಸರ್ಕಾರಿ ಸಂಯೋಜಿತ ಸಂಸ್ಥೆಯಲ್ಲಿ ಶಾಶ್ವತ ನೌಕರರು, ಆದಾಯ ತೆರಿಗೆ, ವೃತ್ತಿಪರ ತೆರಿಗೆ, ಜಿಎಸ್​ಟಿ ಪಾವತಿದಾರರನ್ನು ಪಡಿತರದಿಂದ ಹೊರಗಿಡಬೇಕೆಂದು ಆಯೋಗ ಶಿಫಾರಸು ಮಾಡಿದೆ.

ಧಾರವಾಡದಲ್ಲಿ ಕೆಪಿಎಸ್ಸಿ ಕಚೇರಿ

ಯುಪಿಎಸ್​ಸಿ, ಕೆಪಿಎಸ್​ಸಿ ಮತ್ತು ಕೆಇಎಗೆ ಸಂಬಂಧಿಸಿದ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಬೆಂಗಳೂರು ಹೊರತು ಪಡಿಸಿದರೆ ಧಾರವಾಡದಲ್ಲಿ ನಡೆಯಲಿವೆ. ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗದ ಶಾಖಾ ಕಚೇರಿಯನ್ನು ಧಾರವಾಡದಲ್ಲಿ ತೆರೆಯಲು ಸಲಹೆ ನೀಡಿದೆ.

ಸಿಬ್ಬಂದಿ ವರ್ಗಾಯಿಸಿ

ಕೆಲ ಇಲಾಖೆಗಳಲ್ಲಿ ಹೆಚ್ಚಿನ ಕೆಲಸವಿದ್ದು, ಸಿಬ್ಬಂದಿ ಕೊರತೆ ಇರುತ್ತದೆ. ಮತ್ತೊಂದು ಕಡೆ ಕಡಿಮೆ ಕೆಲಸ ಇದ್ದು, ಹೆಚ್ಚಿನ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುತ್ತಾರೆ. ಎಲ್ಲ ಇಲಾಖೆಗಳ ಪರಿಶೀಲನೆ ನಡೆಸಿ ಬಿ, ಸಿ ಮತ್ತು ಡಿ ದರ್ಜೆಯ ನೌಕರರನ್ನು ಅಗತ್ಯ ಇರುವ ಕಡೆಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ.

ಪಡಿತರ ವ್ಯವಸ್ಥೆ ಸರಿಪಡಿಸಿ

  • ರಾಜ್ಯದಲ್ಲಿ 4.46 ಕೋಟಿ ರೇಷನ್ ಕಾರ್ಡ್ ಇವೆ
  • 46 ಲಕ್ಷ ಹೆಚ್ಚುವರಿ ಕಾರ್ಡ್​ಗಳಿರುವುದು ದೃಢ
  • ಈ ಪೈಕಿ 25 ಲಕ್ಷ ಅನರ್ಹ ಕಾರ್ಡ್​ದಾರರು
  • ಈ ದೋಷಗಳನ್ನು ಸರಿಪಡಿಸಲು ಕ್ರಮ ಆಗಲಿ
  • ಇ-ಆಸ್ತಿ ದತ್ತಾಂಶದೊಂದಿಗೆ ಪರಿಶೀಲಿಸಬೇಕು
  • ತಿಂಗಳಿಗೆ 200 ಯೂನಿಟ್ ಮೀರಬಾರದು
  • ಮೀರಿದರೆ ಅಂತಹ ಕಾರ್ಡ್ ಅನರ್ಹ ಆಗಲಿ
  • ಈ ಹಿಂದೆ 150 ಯೂನಿಟ್​ಗೆ ನಿಗದಿ ಆಗಿತ್ತು
  • ಸ್ಥಳ ಪರಿಶೀಲನೆ, ಆಯ್ಕೆ ಜಾಗೃತಿ ಸಮಿತಿ ಆಗಲಿ
  • ಜಿಲ್ಲಾ, ತಾಲೂಕು ಮಟ್ಟದಲ್ಲಿ ರಚನೆ ಆಗಬೇಕು
  • ಬಿಲ್ ಕಲೆಕ್ಟರ್​ಗಿಂತ ಮೇಲ್ಪಟ್ಟ, ಎಸ್​ಸಿ/ಎಸ್​ಟಿ ತಲಾ ಓರ್ವ ಮಹಿಳಾ ಪಡಿತರದಾರರು ಹಾಗೂ ಒಬಿಸಿ ಮಹಿಳೆಯನ್ನು ಸಮಿತಿಗೆ ಸೇರಿಸಬೇಕು.

ದೇವಾಲಯ ಕಾರ್ಯಪಡೆ ರಚನೆ

ದೇವಸ್ಥಾನದ ದೈನಂದಿನ ಆಡಳಿತ, ಹಣಕಾಸು ನಿರ್ವಹಣೆ, ದೇವಸ್ಥಾನದ ಚಟುವಟಿಕೆಗಳ ಒಟ್ಟಾರೆ ಸಮನ್ವಯ ಮೇಲ್ವಿಚಾರಣೆಗೆ ಕಾರ್ಯಪಡೆ ರಚಿಸಬೇಕು. ಇದರಲ್ಲಿ ಭದ್ರತಾ ಸಿಬ್ಬಂದಿ, ಸ್ವಯಂಸೇವಕರು, ವೈದ್ಯಕೀಯ, ತಾಂತ್ರಿಕ ತರಬೇತಿ ಇರುವ ಸಿಬ್ಬಂದಿ ಇರಬೇಕು ಎಂದು ಮುಜರಾಯಿ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಜತೆಗೆ ಅರ್ಚಕರು ಸೇರಿದಂತೆ ನೌಕರರ ನಿವೃತ್ತಿ ವಯಸ್ಸು 65 ವರ್ಷದಿಂದ 60 ವರ್ಷಕ್ಕೆ ಇಳಿಸಬೇಕು ಎಂದೂ ಹೇಳಲಾಗಿದೆ.

ಸಾರಿಗೆ ಇಲಾಖೆ ಫಸ್ಟ್

ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದ ಅಂಶಗಳಲ್ಲಿ ಅನುಷ್ಠಾನ ಮಾಡಿದ ಪಟ್ಟಿಯಲ್ಲಿ ಸಾರಿಗೆ ಇಲಾಖೆ ಪ್ರಥಮ ಸ್ಥಾನದಲ್ಲಿದೆ. 223 ಶಿಫಾರಸು ಮಾಡಿದ್ದು, 176 (ಶೇ. 79) ಅಳವಡಿಸಿಕೊಂಡಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ 201ರಲ್ಲಿ 98 (ಶೇ. 49) ಮತ್ತು ಇಂಧನ ಇಲಾಖೆ 146 ರಲ್ಲಿ 70 (ಶೇ. 48) ಅಳವಡಿಸಿಕೊಂಡಿದ್ದು, ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.

ಕೆಲಸಕ್ಕೆ ಬಿ, ಸಿ, ಡಿ ನೌಕರರೇ ಇಲ್ಲ!

ಆಡಳಿತ ಸುಧಾರಣೆ ಆಯೋಗವು ಸರ್ಕಾರದ ಆಡಳಿತ ಯಂತ್ರದಲ್ಲಿನ ಹುಳುಕನ್ನು ಎತ್ತಿ ತೋರಿದ್ದು, ಮಂಜೂರಾದ ಹುದ್ದೆಗೆ ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆ ಇದೆ ಎಂಬುದನ್ನು ದಾಖಲೆ ಸಹಿತ ನಿರೂಪಿಸಿದೆ.

  • ಕೃಷಿ ಇಲಾಖೆಗೆ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ 2099 ಹುದ್ದೆ ಮಂಜೂರು, ಖಾಲಿ 1870
  • ನಗರ ಯೋಜನೆಯಲ್ಲಿ 209 ಸಹಾಯಕ ನಗರ ಯೋಜಕ ಹುದ್ದೆ ಮಂಜೂರು, ಖಾಲಿ 200
  • ಮೆಡಿಕಲ್ ಕಾಲೇಜಿನಲ್ಲಿ 1397 ನರ್ಸಿಂಗ್ ಅಧಿಕಾರಿ ಹುದ್ದೆಗಳು ಖಾಲಿ
  • ಮೆಡಿಕಲ್ ಕಾಲೇಜುಗಳಲ್ಲಿ 1431 ಸ್ಥಾನೀಯ ಕಿರಿಯ ವೈದ್ಯರ ಹುದ್ದೆಗಳಲ್ಲಿ 1080 ಖಾಲಿ
  • ಯುವಜನ ಕ್ರೀಡೆಯಲ್ಲಿ 157 ತಾಲೂಕು ಜ್ಯೂನಿಯರ್ ಟ್ರೖೆನರ್, ಸಂಯೋಜಕರೇ ಇಲ್ಲ
  • ಕೌಶಲ ಅಭಿವೃದ್ಧಿಯಲ್ಲಿ 3048 ಕಿರಿಯ ತರಬೇತಿ ಅಧಿಕಾರಿ ಹುದ್ದೆಯಲ್ಲಿ ಅರ್ಧ ಖಾಲಿ
  • ಸರ್ಕಾರದ ವಿವಿಧ ಇಲಾಖೆಯಲ್ಲಿ 21,442 ಹುದ್ದೆಗಳ ಮಂಜೂರು, 15 ಸಾವಿರ ಖಾಲಿ

ಬಾಗಿಲು ಬಂದ್ ಮಾಡಿ

ರಾಜ್ಯದಲ್ಲಿ ಇರುವ ನಿಗಮ, ಮಂಡಳಿ ಮತ್ತು ಸಂಘ ಸಂಸ್ಥೆಗಳ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. 15 ನಿಗಮಗಳು ಮುಗಿದಿದ್ದು, ಕೆಲವು ಕಡೆ ಯಾವುದೇ ಕೆಲಸ ನಡೆಯದೆ ನಿಷ್ಕ್ರಿಯಗೊಂಡಿವೆ. ಯಾವ ನಿಗಮ ಮತ್ತು ಮಂಡಳಿಗಳಿಗೆ ಏನು ಅಗತ್ಯವಿದೆ, ಅದಕ್ಕೆ ಮೂಲಭೂತ ಸೌಕರ್ಯ ಒದಗಿಸಿದರೆ ಏನು ಪ್ರಯೋಜನ ಎಂದು ಅಧ್ಯಯನ ನಡೆಸಿ ಅನಗತ್ಯವಾಗಿರುವ ಇರುವ ನಿಗಮ, ಮಂಡಳಿಗಳನ್ನು ಮುಲಾಜಿಲ್ಲದೇ ಮುಚ್ಚುವಂತೆ ಶಿಫಾರಸು ಮಾಡಿದೆ.