ವಾಷಿಂಗ್ಟನ್/ಮುಂಬೈ: ನಟ ಹಾಗೂ ಸ್ಟಾಂಡ್ಅಪ್ ಕಾಮೆಡಿಯನ್ ವೀರ್ ದಾಸ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಅಮೆರಿಕದಲ್ಲಿ ಮಾಡಿದ ಕಾಮೆಡಿ 'ಪರ್ಫಾರ್ಮೆನ್ಸ್' ಒಂದರಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಬಗ್ಗೆ ಅವರು ಆಡಿರುವ ಮಾತುಗಳು ಹಲವು ರಾಷ್ಟ್ರಭಕ್ತರ ಕೆಂಗಣ್ಣಿಗೆ ಗುರಿಯಾಗಿವೆ.
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಜಾನ್ ಎಫ್ ಕೆನೆಡಿ ಸೆಂಟರ್ನಲ್ಲಿ ಐತಿಹಾಸಿಕವಾದ ಸ್ಟಾಂಡ್ಅಪ್ ಕಾಮೆಡಿ ಶೋ ಮಾಡಲು ಹೋಗಿದ್ದ ದಾಸ್, ತಮ್ಮ ಭಾರತದ ಬಗೆಗಿನ ವ್ಯಂಗ್ಯ ಮತ್ತು ವಿಡಂಬನೆಯ ಭಾಷಣದ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಿದ್ದಾರೆ. 'ಐ ಕಂ ಫ್ರಂ ಟೂ ಇಂಡಿಯಾಸ್' ಎಂಬ ಶೀರ್ಷಿಕೆಯಡಿ ದಾಸ್ ಆಡುವ ಟೀಕೆಯ ಮಾತುಗಳು ಅವರ ಅಭಿಮಾನಿಗಳ ಪ್ರಶಂಸೆ ಗಳಿಸಿದೆ. ಆದರೆ ಜೊತೆಜೊತೆಗೇ, ಹಲವು ನೆಟ್ಟಿಗರು, ತಮ್ಮ ದೇಶದ ಬಗೆಗೇ ಇನ್ನೊಂದು ದೇಶಕ್ಕೆ ಹೋಗಿ ವ್ಯಂಗ್ಯ ಮಾಡುವುದು ಎಂಥಾ ಹಾಸ್ಯ ಎಂದು ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಲವು ರಾಜಕಾರಣಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ವೀರ್ ದಾಸ್ರ ಈ ವ್ಯಂಗ್ಯಮಯ ಮಾನೋಲಾಗ್ ದೇಶಕ್ಕೆ ಅವಮಾನ ಮಾಡುವಂಥದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರನಿರ್ಮಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್ ಪಂಡಿತ್, "ತಮ್ಮದೇ ದೇಶವನ್ನು ಪರದೇಶದಲ್ಲಿ ಜರಿಯುವುದು ಉಗ್ರವಾದ. ವೀರ್ ದಾಸ್ ಮೇಲೆ ಯುಎಪಿಎ ಅಡಿ ಕೇಸು ಹಾಕಿ ಜೈಲಿಗೆ ಕಳುಹಿಸಬೇಕು" ಎಂದಿದ್ದಾರೆ.
ವೀರ್ ದಾಸ್ ವಿರುದ್ಧ ಅದಾಗಲೇ ಎರಡು ಪೊಲೀಸ್ ಕಂಪ್ಲೇಂಟುಗಳೂ ದರ್ಜಾಗಿವೆ ಎನ್ನಲಾಗಿದೆ. ತಮ್ಮ ಭಾಷಣದ ಬಗೆಗಿನ ಕಾಮೆಂಟುಗಳಿಗೆ ಪ್ರತಿಕ್ರಿಯಿಸಿರುವ ದಾಸ್, ನನ್ನ ಭಾಷಣವು ಬೇರೆ ಬೇರೆ ಕೆಲಸ ಮಾಡುವ ಎರಡು ಪ್ರತ್ಯೇಕ ಭಾರತಗಳ ದ್ವಂದ್ವತೆಯ ಬಗೆಗಿನ ಒಂದು ವಿಡಂಬನೆಯಾಗಿದೆ... ಜಗತ್ತು ಭಾರತವನ್ನು ಗೌರವದಿಂದ ನೋಡುತ್ತದೆ ಹಾಗೂ ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಹೊಂದಿದ್ದೇನೆ" ಎಂದು ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)